ಬೆಳ್ತಂಗಡಿ: ಧರ್ಮಸ್ಥಳ ಪರ ಭಕ್ತವೃಂದದಿಂದ ಬೃಹತ್ ಪ್ರತಿಭಟನೆ - ಪ್ರತಿಭಟನಾ ವೇದಿಕೆಗೆ ಬಂದ ಸೌಜನ್ಯಾ ತಾಯಿಗೆ ಮುತ್ತಿಗೆ
Friday, August 4, 2023
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಇತ್ತೀಚಿಗೆ ಸೌಜನ್ಯಾ ಪ್ರಕರಣದ ವಿಚಾರದಲ್ಲಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ಉಜಿರೆಯಲ್ಲಿ ಇಂದು ಧರ್ಮಸ್ಥಳದ ಪರವಾಗಿ ಕ್ಷೇತ್ರದ ಭಕ್ತವೃಂದದಿಂದ ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸೌಜನ್ಯಾ ತಾಯಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ವೇದಿಕೆ ಹತ್ತದಂತೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಜಸ್ಟಿಸ್ ಫಾರ್ ಸೌಜನ್ಯಾ ಭಿತ್ತಿಪತ್ರ ಹಿಡಿದು ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಇನ್ನಿತರ ಮಹಿಳೆಯರು ಆಗಮಿಸಿದ್ದಾರೆ. ಆಗ ಪ್ರತಿಭಟನಾಕಾರರು ಸೌಜನ್ಯಾ ತಾಯಿಗೆ ಮುತ್ತಿಗೆ ಹಾಕಿ, ಅವರನ್ನು ಪ್ರತಿಭಟನಾ ವೇದಿಕೆ ಹತ್ತಲು ಬಿಡದೆ ಧಿಕ್ಕಾರ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಎರಡೂ ಕಡೆಗಳಿಂದ ವಾಗ್ವಾದ, ಆಕ್ರೋಶಗಳು ಕೇಳಿ ಬಂದಿದೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಉದ್ರಿಕ್ತರನ್ನು ಚದುರಿಸಿದ್ದಾರೆ. ಅಲ್ಲದೆ ಸೌಜನ್ಯಾ ತಾಯಿಯನ್ನು ಸಮಾಧಾನಿಸಿ ಹಿಂದೆ ಕಳುಹಿಸಿದ್ದಾರೆ.