ಅಪ್ರಾಪ್ತ ಸೋದರಿಯರಿಬ್ಬರ ಮೇಲೆ ಕಾಮುಕರ ಅಟ್ಟಹಾಸ - ತಂದೆಯ ಸಹೋದ್ಯೋಗಿಗಳೇ ಗರ್ಭಿಣಿಯರನ್ನಾಗಿಸಿದರು
Tuesday, August 1, 2023
ಜೈಪುರ: ಹದಿಹರೆಯದ ಸೋದರಿಯರಿಬ್ಬರ ಮೇಲೆ ಅವರ ತಂದೆಯ ಸಹೋದ್ಯೋಗಿಗಳೇ ಸಾಮೂಹಿಕ ಅತ್ಯಾಚಾರ ಎಸಗಿ ಗರ್ಭಿಣಿಯರನ್ನಾಗಿಸಿದ ದುಷ್ಕೃತ್ಯವೊಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಅಪ್ರಾಪ್ತೆಯರ ತಂದೆ ಎನ್‌ಇಬಿ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿರುವ ಇಬ್ಬರೂ 15 ಮತ್ತು 13 ವರ್ಷ ವಯಸ್ಸಿನವರಾಗಿದ್ದು, ಸಂತ್ರಸ್ತೆಯರಿಬ್ಬರೂ ಗರ್ಭಿಣಿಯರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಪ್ಪಿ ಹಾಗೂ ಸುಭಾನ್ ಕಾಮುಕ ಆರೋಪಿಗಳು. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತೆಯರಲ್ಲಿ ದೊಡ್ಡವಳಿಗೆ ಹೊಟ್ಟೆನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದೆ. ಆದ್ದರಿಂದ ಪೋಷಕರು ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಆಗ ಆಕೆ ಏಳೂವರೆ ತಿಂಗಳ ಗರ್ಭಿಣಿ ಎಂಬ ಅಂಶವನ್ನು ವೈದ್ಯರು ದೃಢಪಡಿಸಿದರು. ಈ ಬಗ್ಗೆ ಪೋಷಕರು ಪ್ರಶ್ನಿಸಿದಾಗ, ಸಪ್ಪಿ ಹಾಗೂ ಸುಭಾನ್ ಅತ್ಯಾಚಾರ ಎಸಗಿದ್ದಾಗಿ ಆಕೆ ತಿಳಿಸಿದ್ದಾಳೆ. ಅಲ್ಲದೆ ತಂಗಿಯ ಮೇಲೂ ಇವರು ಅತ್ಯಾಚಾರ ಎಸಗಿದ್ದಾಗಿ ಮಾಹಿತಿ ನೀಡಿದಳು ಎಂದು ಪೊಲೀಸರು ವಿವರಿಸಿದ್ದಾರೆ.
ಈ ವಿಚಾರವನ್ನು ಬಹಿರಂಗಪಡಿಸಿದರೆ ಹತ್ಯೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಾಗ ಇಬ್ಬರೂ ಗರ್ಭಿಣಿಯರು ಎಂಬ ಅಂಶ ದೃಢಪಟ್ಟಿದೆ ಎಂದು ಅಲ್ವಾರ್ ಎಸ್ಪಿ ಆನಂದ್ ಶರ್ಮಾ ಹೇಳಿದ್ದಾರೆ. ತಂಗಿ ಎರಡೂವರೆ ತಿಂಗಳ ಗರ್ಭಿಣಿಯಾಗಿದ್ದಾಳೆ. ಸಂತ್ರಸ್ತ ಯುವತಿಯರ ತಂದೆ ಕೆಲಸ ಮಾಡುವ ಇಟ್ಟಿಗೆ ಫ್ಯಾಕ್ಟರಿಯ ಬಳಿ ಇವರ ಮನೆಯಿತ್ತು ಎಂದು ಪೊಲೀಸರು ಹೇಳಿದ್ದಾರೆ.