ಮಂಗಳೂರು: ಪಿಎಸ್ಐ ಎಂದು ನಂಬಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಅತ್ಯಾಚಾರ, ಖಾಸಗಿ ಫೋಟೋ ವೈರಲ್
Thursday, August 10, 2023
ಮಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ತಾನು ಪಿಎಸ್ಐ ಎಂದು ನಂಬಿಸಿ ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಭೂಪನೋರ್ವನು ಆಕೆಯ ಖಾಸಗಿ ಫೋಟೋವನ್ನು ವೈರಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
ರಾಯಚೂರು ಮೂಲದ ಯಮನೂರ ಬಂಧಿತ ಆರೋಪಿ.
ಸಂತ್ರಸ್ತೆಗೆ ಆರೋಪಿ ಯಮನೂರ ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾನೆ. ತಾನು ವಾಮಂಜೂರು ಪೊಲೀಸ್ ಸ್ಟೇಷನ್ ನಲ್ಲಿ ಪಿಎಸ್‌ಐ ಎಂದು ಆಕೆಗೆ ನಂಬಿಸಿದ್ದಾನೆ. ಬಳಿಕ ಯುವತಿಯ ಮನೆಯವರಿಗೆ ಕೆಲಸ ದೊರಕಿಸಿ ಕೊಡುವುದಾಗಿ ಅವರ ದಾಖಲಾತಿಗಳನ್ನು ಪಡೆದುಕೊಂಡಿದ್ದಾನೆ. 2023 ಮೇ ವೇಳೆ ಆಕೆಯನ್ನು ಕದ್ರಿ ದೇವಸ್ಥಾನದಲ್ಲಿ ಭೇಟಿಯಾಗಿದ್ದಾನೆ. ಬಳಿಕ ಅದೇ ವಾರ ತಣ್ಣೀರುಬಾವಿ ಬೀಚ್ ಗೆ ಕರೆದೊಯ್ದು ಅಲ್ಲಿ ಆಕೆಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾನೆ.
ಬಳಿಕ ಆ ಫೋಟೋವನ್ನು ಇಟ್ಕೊಂಡು ಅದನ್ನು ವೈರಲ್ ಮಾಡುವುದಾಗಿ ಹೆದರಿಸಿ ಸಂತ್ರಸ್ತೆಯನ್ನು ಬೆಂಗಳೂರಿಗೆ ಕರೆಯಿಸಿದ್ದಾನೆ. ಅಲ್ಲಿ ರಾತ್ರಿ ನೆಲಮಂಗಲದ ಲಾಡ್ಜ್ ಒಂದಕ್ಕೆ ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಮುಲ್ಕಿಯ ಕಿನ್ನಿಗೋಳಿಯ ಲಾಡ್ಜ್ ಗೂ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಳಿಕ ಸಂತ್ರಸ್ತೆಯ ನಗ್ನ ಫೋಟೋಗಳನ್ನು ಆಕೆಯ ಮನೆಯವರು, ಸ್ನೇಹಿತರ ಮೊಬೈಲ್ ಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.
ಬಳಿಕ ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾದರೆ 1,50,000 ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತ ಯುವತಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ಯಮನೂರನನ್ನು ಪೊಲೀಸರು ಮಂಗಳೂರಿನಲ್ಲಿ ದಸ್ತಗಿರಿ ಮಾಡಲಾಗಿದೆ. ಇದೀಗ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣದ ತನಿಖೆಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಲೋಕೇಶ್ ಎ.ಸಿ. ರವರು ನಡೆಸುತ್ತಿದ್ದಾರೆ.