ಇನ್ ಸ್ಟಾಗ್ರಾಂನಲ್ಲಿ ಪರಿಚಿತಳಾದ ಯುವತಿಯನ್ನು ಹೊಟೇಲ್ ಗೆ ಕರೆದೊಯ್ದು ಅತ್ಯಾಚಾರ
Wednesday, August 23, 2023
ಗುರುಗಾಂವ್: ಇನ್ ಸ್ಟಾಗ್ರಾಂನಲ್ಲಿ ಪರಿಚಿತಳಾದ 21 ವರ್ಷದ ಯುವತಿಯ ಮೇಲೆ ಯುವಕನೋರ್ವನು ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಸಂದರ್ಭದ ಆಕೆಯ ಅಶ್ಲೀಲ ಫೋಟೊ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿರುವ ಆತ ಅದನ್ನು ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ದೂರು ದಾಖಲಾಗಿದೆ.
ಸೋನಿಪತ್ ನ ಯುವತಿಗೆ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ವರ್ಷದ ಹಿಂದೆ ಆರೋಪಿ ರಾಹುಲ್ ಎಂಬಾತನ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡು ಚ್ಯಾಟಿಂಗ್ ಮಾಡುತ್ತಿದ್ದರು. ಆತ ಗುರುಗಾಂವ್ ನ ಸೆಕ್ಟರ್ 14ರ ಪೇಯಿಂಗ್ ಗೆಸ್ಟ್ ನಲ್ಲಿ ವಾಸ್ತವ್ಯ ಹೂಡುವಂತೆ ರಾಹುಲ್ ಈಕೆಯ ಮನವೊಲಿಸಿದ್ದ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆಗಸ್ಟ್ 4ರಂದು ರಾಹುಲ್ ತನಗೆ ಕರೆ ಮಾಡಿ ಸೆಕ್ಟರ್ 12ರಲ್ಲಿ ಹೋಟೆಲ್ ಗೆ ಕರೆದೊಯ್ದಿದ್ದಾನೆ. ಅಲ್ಲಿ ವಿವಾಹವಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾನೆ. ಕೃತ್ಯದ ಅಶ್ಲೀಲ ಫೋಟೊಗಳನ್ನು ಕ್ಲಿಕ್ಕಿಸಿದ್ದಲ್ಲದೇ ವಿಡಿಯೊವನ್ನು ಕೂಡಾ ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ಇದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಇದೀಗ ಭಾರತೀಯ ದಂಡಸಂಹಿತೆ ಸೆಕ್ಷನ್ 376 ಹಾಗೂ 506ರ ಅಡಿಯಲ್ಲಿ ಆರೋಪಿ ವಿರುದ್ಧ ಪಶ್ಚಿಮ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.