ತಲಪಾಡಿ ಗ್ರಾಪಂನಲ್ಲಿ ಬಿಜೆಪಿ ಸದಸ್ಯರ ಬಲ - ಬೆಂಬಲದಿಂದ ಎಸ್ ಡಿಪಿಐ ಅಭ್ಯರ್ಥಿ ಅಧ್ಯಕ್ಷ ಸ್ಥಾನಕ್ಕೆ
Thursday, August 10, 2023
ಮಂಗಳೂರು: ತಲಪಾಡಿ ಗ್ರಾಪಂ ಎರಡನೇ ಅವಧಿಗೆ ನಡೆದ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಬದ್ಧ ರಾಜಕೀಯ ವೈರಿ ಎಸ್ ಡಿಪಿಐ ಅಭ್ಯರ್ಥಿಗೆ ಬಲ ನೀಡಿರುವ ಬಿಜೆಪಿ ಸದಸ್ಯರು ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲುವಂತೆ ಮಾಡಿದ್ದಾರೆ. ಈ ಸಮಬಲದ ಪೈಪೋಟಿಯಲ್ಲಿ ಟಾಸ್ ಗೆಲ್ಲುವ ಮೂಲಕ ತಲಪಾಡಿ ಗ್ರಾಪಂನ ಅಧ್ಯಕ್ಷ ಸ್ಥಾನವು ಎಸ್ ಡಿಪಿಐಗೆ ಒಲಿದಿದೆ.
ಈ ಗ್ರಾಪಂನಲ್ಲಿ ಒಟ್ಟು 24 ವಾರ್ಡುಗಳ ಸದಸ್ಯರ ಪೈಕಿ 13 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. 1 ಕಾಂಗ್ರೆಸ್ ಹಾಗೂ 10 ಎಸ್ ಡಿಪಿಐ ಬೆಂಬಲಿತ ಸದಸ್ಯರಿದ್ದಾರೆ. ಆದರೆ ಇಂದು ನಡೆದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ವೈಭವ್ ಶೆಟ್ಟಿ ಮತ್ತು ಎಸ್ ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರು ಹಾಜರಾಗಿದ್ದರು. ಎಸ್ ಡಿಪಿಐ ಅಭ್ಯರ್ಥಿ ಟಿ.ಇಸ್ಮಾಯಿಲ್ ಮತ್ತು ಬಿಜೆಪಿಯ ಸತ್ಯರಾಜ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಿತ್ತು. ಆದರೆ ಇಬ್ಬರು ಬಿಜೆಪಿ ಸದಸ್ಯರು ಎಸ್ ಡಿಪಿಐ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ. ಪರಿಣಾಮ ಎಸ್ ಡಿಪಿಐ ಹಾಗೂ ಬಿಜೆಪಿ ಸಮಬಲದ ಮತ ಪಡೆದುಕೊಂಡಿದೆ. ಬಳಿಕ ಚುನಾವಣಾಧಿಕಾರಿಗಳು ಅಧ್ಯಕ್ಷ ಗಾದಿಗೆ ಚೀಟಿ ಎತ್ತುವ ಪ್ರಕ್ರಿಯೆ ನಡೆಸಿದ್ದು ಟಿ.ಇಸ್ಮಾಯಿಲ್ ಗೆಲುವು ಸಾಧಿಸಿದ್ದಾರೆ.
ಪಂಚಾಯತ್ ನಲ್ಲಿ ಬಿಜೆಪಿ ಪೂರ್ಣ ಬಹುಮತ ಹೊಂದಿದ್ದರೂ, ಇಬ್ಬರು ಸದಸ್ಯರು ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಪಕ್ಷವನ್ನು ತೀವ್ರ ಮುಖಭಂಗಕ್ಕೀಡು ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸತ್ಯರಾಜ್ ಗೆಲ್ಲುವ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಪಕ್ಷದ ಬೆಂಬಲಿಗರು ಹೂಹಾರಗಳನ್ನು ತಂದಿದ್ದರೂ, ಸ್ವಂತ ಪಕ್ಷದವರೇ ವಿರೋಧಿ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರಿಂದ ನಿರಾಶರಾಗಿದ್ದಾರೆ. ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಷ್ಪಾ ಶೆಟ್ಟಿ ಅವಿರೋಧವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.