ತಂಗಿ ನಾಪತ್ತೆಯೆಂದು ರಾತ್ರಿ ದೂರು ನೀಡಿದ ಅಕ್ಕನಿಗೆ ಬೆಳ್ಳಂಬೆಳಗ್ಗೆ ಶಾಕ್
Friday, August 11, 2023
ಬೆಂಗಳೂರು: ರಾತ್ರಿಯಿಂದ ತಂಗಿ ನಾಪತ್ತೆಗಿದ್ದಾಳೆಂದು ಅಕ್ಕ ಪೊಲೀಸ್ ಠಾಣೆಗೆ ದೂರು ನೀಡಿದ ಮಾರನೇ ದಿನವೇ ಅಕೆಯ ಮೃತದೇಹ ಮನೆಯ ಮುಂದೆಯೇ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಮಹದೇವಪುರದ ಲಕ್ಷ್ಮಿ ಸಾಗರ ಲೇಔಟ್ನಲ್ಲಿ ನಡೆದಿದೆ.
ಕಲಬುರಗಿ ಮೂಲದ ಶೆಲ್ ಪೆಟ್ರೋಲ್ ಬಂಕ್ನಲ್ಲಿ ಉದ್ಯೋಗಿಯಾಗಿದ್ದ ಮಹಾನಂದಾ (21) ಮೃತಪಟ್ಟ ದುರ್ದೈವಿ. ಈಕೆ ಮುಂಜಾವು ನಾಲ್ಕು ಗಂಟೆಯ ವೇಳೆಗೆ ಮನೆ ಮುಂದೆಯೇ ಮೃತದೇಹವಾಗಿ ಪತ್ತೆಯಾಗಿದ್ದಾಳೆ.
ಕಲಬುರಗಿ ಮೂಲದ ಅಕ್ಕ-ತಂಗಿ ಇಬ್ಬರು ಶೆಲ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡ್ತಿದ್ದರು. ಗುರುವಾರ ಕೆಲಸಕ್ಕೆ ಹೋಗದೆ ಮಹಾನಂದಾ ಮನೆಯಲ್ಲೇ ಇದ್ದಳು. ರಾತ್ರಿ ಅಡುಗೆ ಮಾಡೋದಕ್ಕೆಂದು ಮಹಾನಂದಾ ಸ್ಟೌ ಮೇಲೆ ಅಕ್ಕಿ ಇಟ್ಟಿದ್ದಳು. ಬಳಿಕ ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದಳು.
ರಾತ್ರಿಯಾದರೂ ತಂಗಿ ಮನೆಗೆ ಬಾರದ ಹಿನ್ನೆಲೆ ಮಹಾನಂದಾಳ ಅಕ್ಕ ದೂರು ನೀಡಿದ್ದಳು. ಬೆಳಗ್ಗೆ 4 ಗಂಟೆಗೆ ನೋಡಿದಾಗ ಮನೆಯ ಬಳಿ ಮಹಾನಂದ ಮೃತದೇಹ ಪತ್ತೆಯಾಗಿದೆ. ಇದನ್ನು ಕಂಡು ಮಹಾನಂದಾಳ ಅಕ್ಕ ಆಘಾತಕ್ಕೆ ಒಳಗಾಗಿದ್ದಾರೆ. ಮಹಾನಂದಾಳನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆಗೈದಿದ್ದಾರೆ ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ಕತ್ತಿನ ಭಾಗದಲ್ಲಿ ಗುರುತು ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಆಕೆಯನ್ನು ಕೊಲೆಗೈದು ಮೃತದೇಹವನ್ನು ಎಸೆದು ಹೋಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಹಾಗೂ ಸೀನ್ ಆಫ್ ಕ್ರೈಮ್ ಅಫೀಸರ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.