118 ಕೋ. ರೂ. ವ್ಯವಹಾರ, ಶೇ 8 ಲಾಭಾಂಶ: ಸೌತ್ ಕೆನರಾ ಗವರ್ನ್‌ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್ ಸಾಧನೆ
118 ಕೋಟಿ ವ್ಯವಹಾರ ನಡೆಸಿ 8% ಡಿವಿಡೆಂಡ್ ಘೋಷಿಸಿದ ಮಂಗಳೂರಿನ ದಿ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್ ಸಾಧನೆ
ಮಂಗಳೂರಿನ ದಿ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್ ಈ ಬಾರಿಯೂ ದಾಖಲೆ ವಹಿವಾಟಿನೊಂದಿಗೆ ಶೇ. 8 ಲಾಭಾಂಶ ಘೋಷಿಸುವ ಮೂಲಕ ಭರ್ಜರಿ ಯಶಸ್ಸು ಸಾಧಿಸಿದೆ.
ಈ ಬ್ಯಾಂಕ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸರಕಾರಿ ನೌಕರರ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾಗಿದೆ. ಮಾತ್ರವಲ್ಲ, ವೇತನದಾರರ ಸಹಕಾರಿ ಬ್ಯಾಂಕುಗಳ ಪೈಕಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿ ಇದ್ದು ಮಹೋನ್ನತ ಗರಿಮೆಗೆ ಭಾಜನವಾಗಿದೆ. ದಕ್ಷಿಣ ಕನ್ನಡದಲ್ಲಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಶತಮಾನದ ಇತಿಹಾಸ ಹೊಂದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ಮಂಗಳೂರಿನ ಡೊಂಗರಕೇರಿ ರಸ್ತೆಯಲ್ಲಿ ಇರುವ ಬ್ಯಾಂಕ್‌ನ 2022-23 ನೆಯ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ದಿನಾಂಕ 20.8.2023 ರಂದು ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆಯಲ್ಲಿರುವ ಶ್ರೀ ಸುಧೀಂದ್ರ ಸಭಾಭವನದಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕು 2022--23 ನೆಯ ಸಾಲಿಗೆ ತೆರಿಗೆಪೂರ್ವ ₹ 48.81 ಲಕ್ಷಗಳಷ್ಟು ಲಾಭ ಗಳಿಸಿದ್ದು ಆದಾಯ ತೆರಿಗೆ ಪಾವತಿಯ ನಂತರ ನಿವ್ವಳ ₹37.66 ಲಕ್ಷ ಲಾಭ ಗಳಿಸಿರುತ್ತದೆ.
ಮಹಾಸಭೆಯ ಪ್ರಾರಂಭಕ್ಕೂ ಮೊದಲು ಠೇವಣಿದಾರರ ಜೊತೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರಗಿತು. ಬಳಿಕ ಬ್ಯಾಂಕಿನ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಬ್ಯಾಂಕಿನ ನಿರ್ದೇಶಕರಾಗಿದ್ದು ಬ್ಯಾಂಕಿನ ಅಭಿವೃದ್ಧಿಗೆ ಕೊಡುಗೆ ನೀಡಿ ಸರಕಾರಿ ಸೇವೆಯಿಂದ ನಿವೃತ್ತರಾದ ಶ್ರೀ ಎಮ್. ಬಿ. ದೇವದಾಸ್ ಮತ್ತು ಶ್ರೀ ಸಿರಿಲ್ ರಾಬರ್ಟ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಬ್ಯಾಂಕಿನ ಹಾಲಿ ನಿರ್ದೇಶಕರಾದ ಶ್ರೀ ಶಿವಾನಂದ ಎಂ. ಮತ್ತು ಶ್ರೀ ಜಗದೀಶ್ ಪಿ. ಅವರನ್ನು ಗೌರವಿಸಲಾಯಿತು.
ಬ್ಯಾಂಕಿನ ಸದಸ್ಯರಾಗಿದ್ದು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀ ಜಯಪ್ಪ ಲಮಾಣಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀ ಯು.ಆರ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಹಾಸಭೆಯ ಕಾರ್ಯಸೂಚಿಗಳನ್ನು ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಲಕ್ಷ್ಮೀಶ ಎನ್. ಮಂಡಿಸಿದರು.
ಬ್ಯಾಂಕಿನ ಸದಸ್ಯರಿಗೆ ಅನುಕೂಲವಾಗುವಂತೆ ಸದಸ್ಯರ ಜಾಮೀನು ಸಾಲ ಹಾಗೂ ಚಿನ್ನಾಭರಣಗಳ ಮೇಲಿನ ಸಾಲಗಳನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ನೀಡುತ್ತದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ತಿಲೋತ್ತಮ ನವೀನ್, ಹಾಗೂ ನಿರ್ದೇಶಕರುಗಳಾದ ಶ್ರೀ ಪದ್ಮನಾಭ ಜೋಗಿ; ಶ್ರೀಮತಿ ಸುಜಾತಾ, ಶ್ರೀಮತಿ ಶಶಿಕಲಾ, ಶ್ರೀ ಅಕ್ಷಯ್ ಭಂಡಾರ್ ಕಾರ್; ಶ್ರೀ ಜಗದೀಶ್ ಪಿ.; ಶ್ರೀ ಎ. ಫ್ರಾಂಕಿ ಕುಟಿನ್ಹಾ; ಶ್ರೀ ಶಿವಾನಂದ ಎಂ. ಶ್ರೀ ಪ್ರದೀಪ್ ಡಿ' ಸೋಜಾ, ಶ್ರೀ ಶಮಂತ್ ಕುಮಾರ್ ಮತ್ತು ಶ್ರೀ ಹೇಮಚಂದ್ರ ಉಪಸ್ಥಿತರಿದ್ದರು.