ಒಂದೂವರೆ ಅಡಿ ಜಮೀನಿಗೆ ಪುತ್ರ - ಸೊಸೆಯಿಂದ ಕಿರುಕುಳ : ಕ್ರಿಮಿನಾಶಕ ಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ
Monday, August 21, 2023
ತೆಲಂಗಾಣ: ಒಂದೂವರೆ ಅಡಿ ಜಮೀನಿಗೆ ಪುತ್ರ ಹಾಗೀ ಸೊಸೆ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೆ ವೃದ್ಧ ದಂಪತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕಾರಿ ಘಟನೆಯೊಂದು ರಾಜಣ್ಣ ಸಿರಿಸಿಲ್ಲ ಜಿಲ್ಲೆಯಲ್ಲಿ ನಡೆದಿದೆ.
ಚಂದುಪರ್ತಿ ಮಂಡಲದ ಆಶಿರೆಡ್ಡಿಪಲ್ಲಿ ಗ್ರಾಮದ ನಿವಾಸಿ ಕನಿಕಾರಪು ದೇವಯ್ಯ (69) ಮತ್ತು ಲಕ್ಷ್ಮೀನರಸವ್ವ (60) ಮೃತರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾರೆ.
ಹಿರಿಯ ಪುತ್ರ ಹಳೆಯ ಮನೆಯ ಹಿಂದೆ ಮನೆ ಕಟ್ಟುತ್ತಿದ್ದಾನೆ. ಆದರೆ ಹಳೆಮನೆಯಿಂದ ಆತನಿಗೆ ಒಂದೂವರೆ ಅಡಿ ಜಮೀನು ಕೊಡಬೇಕಿತ್ತು. ಆದ್ದರಿಂದ ಮನೆ ಕೆಡವುವಂತೆ ಪೋಷಕರಿಗೆ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಶನಿವಾರ ಪೋಷಕರೊಂದಿಗೆ ಜಗಳವಾಡಿದ್ದಾನೆ. ರವಿವಾರ ಬೆಳಗ್ಗೆ ಮನೆ ಕೆಡವುತ್ತೇವೆಂದು ಪೋಷಕರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಇದರಿಂದ ಮನನೊಂದ ವೃದ್ಧ ದಂಪತಿ ಶನಿವಾರ ರಾತ್ರಿ ಮನೆಯಲ್ಲಿದ್ದ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ದಂಪತಿ ಬಾಗಿಲು ತೆರೆಯದಿರುವುದನ್ನು ಕಂಡು ಅಕ್ಕಪಕ್ಕದ ಮನೆಯವರು ಪರಿಶೀಲನೆ ನಡೆಸಿದಾಗ ಅವರು ಮಲಗಿದ್ದಲ್ಲೇ ಅಸ್ತವ್ಯಸ್ತಗೊಂಡಿರುವುದು ಕಂಡು ಬಂದಿದೆ. ಈ ಕುರಿತು ಕಿರಿಯ ಪುತ್ರ ಮಲ್ಲೇಶಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.