ಟೆಲಿಗ್ರಾಂ( Telegram) ನಲ್ಲಿ ನಕಲಿ ಖಾತೆ ಸೃಷ್ಟಿಸಿ ಶಿಕ್ಷಕಿಗೆ ಒಂದು ಲಕ್ಷ ವಂಚನೆ- ಆರೋಪಿ ಬಂಧನ
Friday, August 4, 2023
ಮಂಗಳೂರು: ಟೆಲಿಗ್ರಾಂ ಆ್ಯಪ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅದರ ಮೂಲಕ ಶಿಕ್ಷಕಿಯೊಬ್ಬರಿಗೆ ಸಂದೇಶ ಕಳುಹಿಸಿ 1 ಲಕ್ಷ ರೂ. ವಸೂಲಿ ಮಾಡಿದ್ದ ವಂಚಕನನ್ನು ವೇಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸುಲೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವಥ್ ಹೆಬ್ಬಾರ್ (23) ಬಂಧಿತ ಆರೋಪಿ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಸುಲೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಎಂಬವರಿಗೆ
ಅಶ್ವಥ್ ಹೆಬ್ಬಾರ್ ನಕಲಿ ಟೆಲಿಗ್ರಾಂ ಖಾತೆ ಮೂಲಕ 3 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟು ಹಣ ನೀಡದಿದ್ದರೆ ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದನು. ಈ ಬಗ್ಗೆ ಜ್ಯೋತಿ ಅವರು ವೇಣೂರು ಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ಕಾರ್ಯಾಚರಣೆಗಿಳಿದ ವೇಣೂರು ಠಾಣೆಯ ಉಪನಿರೀಕ್ಷಕಿ ಸೌಮ್ಯ ಜೆ., ಆನಂದ ಎಂ. ಅವರ ತಂಡ ಆ.2ರ ಮಧ್ಯರಾತ್ರಿ ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬೇಡಿಕೆ ಇಟ್ಟ 3 ಲಕ್ಷ ರೂ ಬದಲಿಗೆ 1 ಲಕ್ಷ ರೂ. ನೀಡುವುದಾಗಿ ಆರೋಪಿಯನ್ನು ಟೆಲಿಗ್ರಾಂನಲ್ಲಿ ಒಪ್ಪಿಸಲಾಗಿತ್ತು.
ಅದರಂತೆ ಆರೋಪಿ ಸಂಜೆ ಅಳದಂಗಡಿ ಕೆದ್ದು ಸಮೀಪ ಹಣ ಎಸೆದು ಹೋಗುವಂತೆ ಸೂಚಿಸಿದ್ದ. ಬಳಿಕ ಅಲ್ಲಿ ಎಸೆಯಬೇಡಿ ಎಂದು ಸಂದೇಶ ರವಾನಿಸಿದ್ದ. ಆ ಬಳಿಕ ಮತ್ತೊಂದು ಸ್ಥಳ ಸೂಚಿಸಿದ್ದ. ಹೀಗೆ ಮೂರಾಲ್ಕು ಬಾರಿ ಸ್ಥಳ ಬದಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದ ಆರೋಪಿ ಶಿರ್ಲಾಲು ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಬಿಸಾಡಿ ಹೋಗುವಂತೆ ತಿಳಿಸಿದ್ದಾನೆ. ಅದರಂತೆ ಹಣದ ಕಟ್ಟನ್ನು ಶಿಕ್ಷಕಿ ಬಿಸಾಡಿ ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಕಟ್ಟನ್ನು ಪಡೆದು ಕೊಳ್ಳುವಷ್ಟರಲ್ಲಿ ಮೊದಲೇ ಕಾದು ಕುಳಿತಿದ್ದ ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ.
ಕ್ಷಿಪ್ರ ಕಾರ್ಯಾ ಚರಣೆಗಿಳಿದ ಪೊಲೀಸರು ತಡರಾತ್ರಿ ಆತನ ಅಣ್ಣನ ಮನೆ ಗುಂಡೇರಿ ಸಮೀಪ ಬಂಧನ ಮಾಡಿ ಆತ ವಸೂಲಿ ಮಾಡಿದ್ದ 1 ಲಕ್ಷ ರೂ ನಗದು, ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.