ಪತ್ನಿಗೆ ದೇವಾಲಯ ಕಟ್ಟಿ ನಿತ್ಯವೂ ಪೂಜೆ ಮಾಡುತ್ತಿರುವ ಪತಿ
Tuesday, August 22, 2023
ತೆಲಂಗಾಣ: ಪತಿ - ಪತ್ನಿಯ ನಡುವಿನ ಪ್ರೀತಿ ಅಳೆಯಲಸಾಧ್ಯ. ಅದೇ ರೀತಿ ಇಲ್ಲೊಬ್ಬ ಪತಿ ಮಡಿದ ತನ್ನ ಪತ್ನಿಗೆ ದೇವಸ್ಥಾನ ಕಟ್ಟಿಸಿ ಪೂಜೆ ಮಾಡುತ್ತಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಇಂತಹ ಆದರ್ಶ ಪತಿಯನ್ನು ಕಾಣಬೇಕಾದರೆ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಮಂಡಲದ ತೊಗರ್ರೈ ಗ್ರಾಮಕ್ಕೆ ಬರಬೇಕು. ಇಲ್ಲಿನ ಜೊಂಗೊನಿ ಮುತ್ತಯ್ಯನವರು ಪತ್ನಿ ಸತ್ತ ಮೇಲೆ ದೇವಸ್ಥಾನ ಕಟ್ಟಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಜಂಗೋಣಿ ಲಕ್ಷ್ಮಿ ಏಳು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ಅವರು ತಮ್ಮ ಜಮೀನಿನಲ್ಲಿ ತನ್ನ ಪತ್ನಿಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಪ್ರತಿನಿತ್ಯ ಅಲ್ಲಿಗೆ ಹೋಗಿ ಪೂಜೆ ಮಾಡುತ್ತಾರೆ. ಮೃತರ ನಿಮಿತ್ತ ಸುಲ್ತಾನಾಬಾದ್ ನ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗ ಅನ್ನದಾನ ಮಾಡುತ್ತಾರೆ.
ಜೊಂಗೊನಿ ಮುತ್ತಯ್ಯ ನಿತ್ಯವೂ ಬೆಳಗ್ಗೆ ಎದ್ದು ಮೊದಲು ಪತ್ನಿಯ ಸಮಾಧಿಯ ಬಳಿಗೆ ಬರುತ್ತಾರೆ. ಸಮಾಧಿಯನ್ನು ನೀರಿನಿಂದ ಸ್ವಚ್ಛಗೊಳಿಸಿ ಬಳಿಕ ಅದನ್ನು ಹೂವಿನಿಂದ ಅಲಂಕರಿಸುತ್ತಾರೆ. ವಿಗ್ರಹಕ್ಕೆ ಬೊಟ್ಟು ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ಯಾವುದಾದರೂ ಪ್ರಸಾದ ಕೂಡ ನೀಡಿ ಬಳಿಕ ಅಲ್ಲಿಯೇ ಊಟವನ್ನೂ ಮಾಡಿ ಮತ್ತೆ ಸಂಜೆ ಪೂಜೆ ಮಾಡಿ ಮನೆಗೆ ಹೋಗುತ್ತಾರೆ.
ಮುತ್ತಯ್ಯ ತಮ್ಮ ಪತ್ನಿಯನ್ನು ದೇವತೆ ಎಂದು ಹೇಳುತ್ತಾರೆ. ಮುತ್ತಯ್ಯನವರ ಪತ್ನಿ ಮೂರ್ತಿಯನ್ನು ಪೂಜೆ ಮಾಡುವುದನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರೂ ಬರುತ್ತಾರೆ. ಮೃತ ಲಕ್ಷ್ಮೀ ಸಮಾಧಿ ಬಳಿ ಮರ, ಹೂವಿನ ಗಿಡಗಳನ್ನೂ ಬೆಳೆಸಲಾಗಿದೆ. ಇಲ್ಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ.