UDUPI- ಶಾಲೆಗೆ ಹೋಗುತ್ತಿದ್ದ 15 ವರ್ಷದ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ- ಆರೋಪಿಗೆ ಕಠಿಣ ಶಿಕ್ಷೆ
Wednesday, August 9, 2023
ಉಡುಪಿ: ಕೋಟ ಠಾಣಾ ವ್ಯಾಪ್ತಿಯಲ್ಲಿ 4 ವರ್ಷಗಳ ಹಿಂದೆ ನಡೆದ ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ(ಪೋಕ್ಸೋ) ತ್ವರಿತ ವಿಶೇಷ ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಬ್ರಹ್ಮಾವರ ತಾಲೂಕು ಬಾಳಕುದ್ರು ನಿವಾಸಿ ಅಶೋಕ್ ಎ. (32) ಶಿಕ್ಷೆಗೆ ಗುರಿಯಾಗಿರುವ ಅಪರಾಧಿ
15ರ ಹರೆಯದ ಬಾಲಕಿಯನ್ನು ಪರಿಚಯ ಮಾಡಿಕೊಂಡ ಅಶೋಕ್, ಶಾಲೆಗೆ ಹೋಗುವ ಸಮಯ ಆಕೆ ಯನ್ನು ತನ್ನ ಕಾರಿನಲ್ಲಿ ಇನ್ನೋರ್ವ ಆರೋಪಿಯ ಮನೆಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಬಲಾತ್ಕಾರವಾಗಿ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿ ಮನೆಗೆ ಬಿಟ್ಟಿದ್ದನು. ಇದೇ ವೇಳೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನು.
ನೊಂದ ಬಾಲಕಿ ಬೇಸರದಲ್ಲಿರುವುದನ್ನು ಗಮನಿಸಿದ ಮನೆಯವರು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂತು. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಆಗಿನ ಡಿವೈಎಸ್ಪಿ ಜೈಶಂಕರ್ ಆರೋಪಿಯ ವಿರುದ್ಧ ದೋಷಾ ರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ಈಗಾಗಲೇ ವಿವಾಹವಾಗಿದ್ದು ನೊಂದ ಬಾಲಕಿಗೆ ದೌರ್ಜನ್ಯ ಎಸಗಿರುವುದು ಬಾಲಕಿಯ ಸಾಕ್ಷ್ಯ ಮತ್ತು ಇತರ ಸಾಂಧರ್ಬಿಕ ಸಾಕ್ಷ್ಯಗಳಿಂದ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗೆ 20ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದರು. ಅಲ್ಲದೆ 23ಸಾವಿರ ರೂ. ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ 10ಸಾವಿರ ರೂ ಸರಕಾರಕ್ಕೆ ಮತ್ತು 13ಸಾವಿರ ರೂ. ನೊಂದ ಬಾಲಕಿಗೆ ಪರಿಹಾರವಾಗಿ ನೀಡಬೇಕು ಮತ್ತು ಸಂತ್ರಸ್ತೆಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿ ಆದೇಶಿಸಿದರು.
ಬಾಲಕಿಯ ದೈಹಿಕ ದೌರ್ಜನ್ಯಕ್ಕೆ ಸಹಕರಿಸಿದ ಎನ್ನಲಾದ ಇನ್ನೋರ್ವ ಆರೋಪಿಯನ್ನು ಸಾಕ್ಷಾಧಾರಗಳ ಕೊರತೆಯಿಂದ ನ್ಯಾಯಾಲಯ ಬಿಡುಗಡೆಗೊಳಿಸಿದೆ.