ನಟ ಯೋಗಿಬಾಬುಗೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ ಪುರೋಹಿತ: ವೀಡಿಯೋ ವೈರಲ್
Tuesday, August 8, 2023
ಚೆನ್ನೈ: ಹಾಸ್ಯನಟ ಯೋಗಿಬಾಬು ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದವರು. ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಯೋಗಿಬಾಬು ಸದ್ಯ ಕಾಲಿವುಡ್ನಲ್ಲಿ ಬಹು ಬೇಡಿಕೆಯ ಹಾಸ್ಯನಟ ಎನಿಸಿಕೊಂಡಿದ್ದಾರೆ. ಎಲ್ಲ ಸೂಪರ್ಸ್ಟಾರ್ಗಳೊಂದಿಗೂ ನಟಿಸಿ ಸೈ ಎನಿಸಿಕೊಂಡಿರುವ ಇವರು ರಜನಿಕಾಂತ್ರೊಂದಿಗೆ ಜೈಲರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 10ರಂದು ಬಿಡುಗಡೆಯಾಗಲಿದೆ.
ಇದೀಗ ಯೋಗಿಬಾಬುಗೆ ಸಂಬಂಧಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಟ ಯೋಗಿ ಬಾಬು ಅವರು ಮುರುಗನ್ ದೇವರ ದೊಡ್ಡ ಭಕ್ತರು. ಆದ್ದರಿಂದ ಅವರು ಆಗಾಗ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಕಳೆದ ತಿಂಗಳು ತಿರುವಳ್ಳೂರ್ ಜಿಲ್ಲೆಯಲ್ಲಿರುವ ಸಿರುವಪುರಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ವೈರಲ್ ಆಗಿರುವ ವೀಡಿಯೋ ಇದಕ್ಕೆ ಸಂಬಂಧಿಸಿದ್ದಾಗಿದೆ.
ಪಂಚೆ ಮತ್ತು ಶರ್ಟ್ ಧರಿಸಿ, ಹೂವು ಮತ್ತು ನಿಂಬೆಹಣ್ಣಿನ ಹಾರ ಹಾಕಿಕೊಂಡಿರುವ ಯೋಗಿ ಬಾಬು ಮೊದಲು ಅಭಿಮಾನಿಯೊಬ್ಬರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಇದಾದ ಬಳಿಕ ಅವರು ಅಲ್ಲಿಯೇ ಇದ್ದ ಪೂಜಾರಿಯೊಬ್ಬರ ಬಳಿ ತೆರಳಿ ಶೇಕ್ ಹ್ಯಾಂಡ್ ಮಾಡಲು ಕೈ ಮುಂದೆ ಚಾಚುತ್ತಾರೆ. ಆದರೆ, ಪೂಜಾರಿ ಶೇಕ್ ಹ್ಯಾಂಡ್ ಮಾಡದೇ ಅಲ್ಲಿಯೇ ನಿಂತು ಆಶೀರ್ವಾದ ಮಾಡಿದಂತೆ ಮಾಡಿ ಕಳುಹಿಸುತ್ತಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಪೂಜಾರಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ ಎಂದು ಕಿಡಿಕಾರಿದ್ದಾರೆ. ಆದರೆ, ಇನ್ನು ಕೆಲವರು ಹ್ಯಾಂಡ್ಶೇಕ್ ನಮ್ಮ ಸಂಸ್ಕೃತಿಯ ಭಾಗವಲ್ಲ ಎಂದು ಕಾಮೆಂಟ್ ಮಾಡುವ ಮೂಲಕ ಪೂಜಾರಿ ಪರ ಬ್ಯಾಟ್ ಬೀಸಿದ್ದಾರೆ.