ವಿಟ್ಲದಲ್ಲಿ ಬಾಲಕಿಯ ಲೈಂಗಿಕ ದೌರ್ಜನ್ಯ: ಮತ್ತೊಬ್ಬ ಆರೋಪಿ ಬಂಧನ
Wednesday, August 2, 2023
ವಿಟ್ಲ: ಪರಿಶಿಷ್ಟ ಪಂಗಡದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ವಿಟ್ಲ ಪೊಲೀಸರು ಬಂಧನ ಮಾಡಿದ್ದಾರೆ.
ರಾಜ ಯಾನೆ ರಾಜೇಶ (26) ಬಂಧಿತ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನ್ನ ಮೇಲೆ ಒಟ್ಟು ಐವರು ಬೇರೆ ಬೇರೆ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬಾಲಕಿ ದೂರು ನೀಡಿದ್ದಳು. ಬಾಲಕಿ ಆರೋಪಿಗಳ ಹೆಸರನ್ನು ತನಿಖಾಧಿಕಾರಿಗೆ ತಿಳಿಸಿದ್ದರು. ಅವರಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಇದುವರೆಗೆ ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.
'ಈ ಪ್ರಕರಣದ ಎಲ್ಲ ಐವರು ಆರೋಪಿಗಳ ಬಂಧನವಾಗಿದೆ. ಎಲ್ಲರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವೆ. ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.