ಸ್ವಿಜರ್ಲ್ಯಾಂಡ್ ನಲ್ಲಿ ಹಿಜಾಬ್, ಬುರ್ಕಾ ನಿಷೇಧ- ಧರಿಸಿದರೆ 1,100 ಡಾಲರ್ ದಂಡ!
ಸ್ವಿಟ್ಜರ್ ಲ್ಯಾಂಡ್: ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮ್ ಮಹಿಳೆಯರು ಹಿಜಾಬ್, ಬುರ್ಖಾ ಧರಿಸಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಹಿಜಾಬ್ ಗೆ ನಿಷೇಧ ಹೇರುವ ವಿಧೇಯಕ್ಕೆ ಸ್ವಿಟ್ಜರ್ ಲ್ಯಾಂಡ್ ನ ಪಾರ್ಲಿಮೆಂಟ್ ಬುಧವಾರ ಅಂಗೀಕಾರ ನೀಡಿದೆ.
ಸ್ವಿಟ್ಜರ್ ಲ್ಯಾಂಡ್ ನ ಬಲಪಂಥೀಯ ಆಡಳಿತದ ಪೀಪಲ್ಸ್ ಪಕ್ಷವು ಈಗಾಗಲೇ ಪಾರ್ಲಿಮೆಂಟ್ ನ ಮೇಲ್ಮನೆಯಲ್ಲಿ ಹಿಜಾಬ್ ನಿಷೇಧದ ವಿಧೇಯಕಕ್ಕೆ ಅಂಗೀಕಾರ ಪಡೆದಿತ್ತು. ಸ್ವಿಸ್ ನ್ಯಾಷನಲ್ ಕೌನ್ಸಿಲ್ ನಲ್ಲಿ ವಿಧೇಯಕಕ್ಕೆ 151-29ರ ಅನುಪಾತದಲ್ಲಿ ಮತ ಚಲಾವಣೆಯೊಂದಿಗೆ ಅಂಗೀಕಾರ ಪಡೆಯಲಾಗಿತ್ತು ಎಂದು ವರದಿ ತಿಳಿಸಿದೆ.
ಹಿಜಾಬ್ ನಿಷೇಧದ ವಿಧೇಯಕಕ್ಕೆ ಕೆಳಮನೆಯಲ್ಲಿ ಅಂಗೀಕಾರ ದೊರಕಿದೆ. ಈ ಮೂಲಕ ಇನ್ನು ಮುಂದೆ ಇದು ಫೆಡರಲ್ ಕಾನೂನಾಗಿ ಜಾರಿಗೊಳ್ಳಲಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಹಿಜಾಬ್ ಅಥವಾ ಬುರ್ಖಾ ಧರಿಸಿದ್ದಲ್ಲಿ, ಅವರಿಗೆ 1,100 ಡಾಲರ್ ವರೆಗೆ ದಂಡ ವಿಧಿಸಲಾಗುವುದು ಎಂದು ಸ್ವಿಸ್ ಸರ್ಕಾರ ತಿಳಿಸಿದೆ.
ಮುಸ್ಲಿಮ್ ವುಮೆನ್ಸ್ ಗ್ರೂಪ್ ನ ವಕ್ತಾರೆ ಇನೆಸ್ ಎಲ್ ಶಿಕ್ ಈ ನಿಷೇಧದ ಬಗ್ಗೆ ಎಎಫ್ ಪಿ ನ್ಯೂಸ್ ಏಜೆನ್ಸಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಕೇವಲ 30 ಮಹಿಳೆಯರು ಹಿಜಾಬ್ ಧರಿಸುತ್ತಾರೆ. ಆದರೆ ಸರ್ಕಾರ ಇಡೀ ದೇಶಾದ್ಯಂತ ಮುಸ್ಲಿಂ ವಿರೋಧಿ ಭಾವನೆಯನ್ನು ಹರಡುವ ನಿಟ್ಟಿನಲ್ಲಿ ನಿಷೇಧ ಕಾನೂನನ್ನು ಜಾರಿಗೆ ತಂದಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಷೇಧ ಕಾಯ್ದೆ ಜಾರಿಯಾಗುವ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲೂ ಮೂಗು, ಬಾಯಿ ಹಾಗೂ ಕಣ್ಣು ಮುಚ್ಚುವ ಹಿಜಾಬ್ ಧರಿಸಲು ಅವಕಾಶವಿಲ್ಲ. ಪೂರ್ಣ ಪ್ರಮಾಣದ ಬುರ್ಖಾ ಧರಿಸುವ ಪದ್ಧತಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇಲ್ಲ. ಆದರೆ ಬೆಲ್ಚಿಯಂ, ಫ್ರಾನ್ಸ್ ದೇಶಗಳು ಹಿಜಾಬ್ ನಿಷೇಧಿಸಿದಂತೆ ನಾವೂ ಕೂಡಾ ಕೆಲವು ಮಾನದಂಡಗಳನ್ನು ಜಾರಿಗೊಳಿಸಿದ್ದೇವೆ ಎಂದು ಸ್ವಿಟ್ಜರ್ ಲ್ಯಾಂಡ್ ತಿಳಿಸಿದೆ.