168 ಇಲಿಗಳನ್ನು ಹಿಡಿಯಲು ಉತ್ತರ ರೈಲ್ವೇಯ ಲಕ್ನೋ ವಿಭಾಗ ವ್ಯಯ ಮಾಡಿದ್ದು 69.5 ಲಕ್ಷ ರೂಪಾಯಿ
Saturday, September 16, 2023
ಭೋಪಾಲ್: ಒಂದು ಇಲಿ ಹಿಡಿಯಲು ಎಷ್ಟು ವೆಚ್ಚವಾಗಬಹುದು ಎಂದು ಕೇಳಿದರೆ ಎಷ್ಟು ಎಂಬ ಉತ್ತರ ನಿಮ್ಮಲ್ಲಿದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಉತ್ತರ ರೈಲ್ವೆಯ ಲಕ್ನೋ ವಿಭಾಗದಲ್ಲಿ ಇಲಿ ಹಿಡಿಯುವುದಾದಲ್ಲಿ ಒಂದು ಇಲಿ ಹಿಡಿಯಲು ರೂ. 41 ಸಾವಿರ ರೂಪಾಯಿ ವೆಚ್ಚವಾಗುತ್ತದೆ.
ನೀಮಚ್ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಚಂದ್ರಶೇಖರ ಗೌರ್ ಮಾಹಿತಿ ಹಕ್ಕು ಕಾಯ್ದೆಯಡಿ ಈ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ದೊರಕಿದ ಉತ್ತರದ ಪ್ರಕಾರ ಉತ್ತರ ರೈಲ್ವೆಯ ಲಕ್ನೋ ವಿಭಾಗ 2020ರಿಂದ 2022ರ ವರೆಗೆ 168 ಇಲಿಗಳನ್ನು ಹಿಡಿಯಲು 69.5 ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಅಂದರೆ ಒಂದು ವರ್ಷಕ್ಕೆ ಇಲಿ ಹಿಡಿಯಲು ಆದ ವೆಚ್ಚ 23.2 ಲಕ್ಷ ರೂ. ವೆಚ್ಚ ಮಾಡಿದೆ. ಅಂದರೆ ಒಂದು ಇಲಿ ಹಿಡಿಯಲು ಮಾಡಿರುವ ವೆಚ್ಚ ಕೇವಲ 41 ಸಾವಿರ ರೂಪಾಯಿ.
ಭಾರತೀಯ ರೈಲ್ವೆಯಲ್ಲಿ ಪ್ರಾಥಮಿಕ ನಿರ್ವಹಣೆ ಶೀರ್ಷಿಕೆಯಡಿ ಕೀಟ ಮತ್ತು ಜಂತುಗಳ ನಿವಾರಣೆ ಬರುತ್ತದೆ. ಈ ವಿಭಾಗದ ವಶದಲ್ಲಿರುವ ರೈಲುಗಳಲ್ಲಿ ಪ್ರಾಥಮಿಕ ನಿರ್ವಹಣೆ ಮಾಡಲಾಗುತ್ತದೆ. ಉತ್ತರ ರೈಲ್ವೆ ದೆಹಲಿ, ಅಂಬಾಲಾ, ಲಕ್ಕೋ, ಫಿರೋಜ್‌ಪುರ ಮತ್ತು ಮೊರದಾಬಾದ್ ಹೀಗೆ ಐದು ವಿಭಾಗಗಳನ್ನು ಹೊಂದಿದೆ. ಗೌರ್, ಉತ್ತರ ರೈಲ್ವೆಗೆ ಈ ಪ್ರಶ್ನೆ ನೀಡಿದ್ದು, ಲಕ್ನೋದಿಂದ ಮಾತ್ರ ಉತ್ತರ ಲಭ್ಯವಾಗಿದೆ.
ಫಿರೋಜ್‌ಪುರ ಮತ್ತು ಮೊರಾದಾಬಾದ್ ಉತ್ತರ ನೀಡಿಲ್ಲ. ಅಂಬಾಲ ಹಾಗೂ ದೆಹಲಿ ವಿಭಾಗಗಳು ಬಲೆಯನ್ನು ಕಂಡು ಓಡುವ ಜಾಣ ಇಲಿಗಳಂತೆ ತಪ್ಪಿಸಿಕೊಂಡಿವೆ. ಇಲಿಗಳಿಂದ ಆಗಿರುವ ಹಾನಿ ಬಗ್ಗೆ ಕೇಳಿದ ಪ್ರಶ್ನೆಗೆ ಲಕ್ಕೋದಿಂದ ಕೂಡಾ ಸಮರ್ಪಕ ಉತ್ತರ ಸಿಕ್ಕಿಲ್ಲ, "ಹಾನಿಯಾಗಿರುವ ಸರಕು ಮತ್ತು ಸರಂಜಾಮುಗಳ ವಿವರಗಳು ಲಭ್ಯವಿಲ್ಲ. ಎಷ್ಟು ಹಾನಿಯಾಗಿದೆ ಎನ್ನುವ ಮೌಲ್ಯಮಾಪನ ನಡೆದಿಲ್ಲ” ಎಂದು ಹೇಳಿದೆ.