ಇತಿಹಾಸದಲ್ಲಿಯೇ ಭಾರೀ ಪ್ರಮಾಣದ ಭೂಕಂಪಕ್ಕೆ ಮೊರಾಕ್ಕೊ ತತ್ತರ: 2000ಕ್ಕೂ ಅಧಿಕ ಮಂದಿ ಸಾವು
Sunday, September 10, 2023
ವಾಷಿಂಗ್ಟನ್: ಮೊರಾಕ್ಕೊ ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿರುವ ಭೂಕಂಪ ಶುಕ್ರವಾರ ನಡೆದಿದೆ. ಈ ಭೂಕಂಪದಲ್ಲಿ 2000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ಶನಿವಾರ ವರದಿ ಪ್ರಕಟಿಸಿದ್ದಾರೆ. ಅಲ್ಲದೆ ಆಸ್ತಿಪಾಸ್ತಿಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಭೀಕರ ಭೂಕಂಪದಿಂದ ಭೀತರಾದ ಜನತೆ ಮಧ್ಯರಾತ್ರಿಯ ವೇಳೆ ಚೀರಾಡುತ್ತಾ ಬೀದಿಗೆ ಬಂದಿದ್ದರು.
ಶುಕ್ರವಾರ ರಾತ್ರಿ 11.11ರ ಸುಮಾರಿಗೆ 6.8 ತೀವ್ರತೆಯ ಭೂಕಂಪವು ಮೊರಕ್ಕೊದ ಪ್ರವಾಸಿತಾಣ ಮರಕೇಶ್‌ನ 72 ಕಿ.ಮೀ. ದೂರದ ಪರ್ವತಶ್ರೇಣಿಯಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯಲಾಜಿಕಲ್ ಸರ್ವೆ ವರದಿ ಮಾಡಿದೆ. ಈ ದುರಂತದಲ್ಲಿ ಕನಿಷ್ಠ 2012 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 2059 ಮಂದಿ ಗಾಯಗೊಂಡಿದ್ದು, ಈ ಪೈಕಿ 1404 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಸರ್ಕಾರದ ವರದಿ ತಿಳಿಸಿದೆ.
ಮೊರಕ್ಕೊದ ಕರಾವಳಿ ನಗರಗಳಾದ ರೊಬಾಟ್, ಕಾಸಾಬ್ಲಾಂಕಾ ಮತ್ತು ಎಸ್ಪೋರಿಯಾದಲ್ಲಿ ಕೂಡಾ ತೀವ್ರ ಭೂಕಂಪನದ ಅನುಭವವಾಗಿದೆ. ಇದು ಮೊರಕ್ಕೊದ 120 ವರ್ಷಗಳ ಇತಿಹಾಸದಲ್ಲೇ ಉತ್ತರ ಆಫ್ರಿಕಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪವಾಗಿದೆ.
"ನಾನು ಬಹುತೇಕ ನಿದ್ದೆಗೆ ಜಾರಿದ್ದೆ, ಕಿಟಕಿ ಬಾಗಿಲುಗಳು ಜೋರಾಗಿ ಬಡಿದುಕೊಂಡವು" ಎಂದು ಮರಕೇಶ್‌ಗೆ ಭೇಟಿ ನೀಡಿದ್ದ 80ರ ವೃದ್ಧೆ ಘನ್ನೋವು ನಜೇಮ್ ಅನುಭವ ಹಂಚಿಕೊಂಡರು. "ಭೀತಿಯಿಂದ ನಾನು ಹೊರಗೆ ಓಡಿದೆ. ಒಬ್ಬಂಟಿಯಾಗಿ ನಾನು ಸಾಯುತ್ತಿದ್ದೇನೆ ಎಂಬ ಭಾವನೆ ಬಂತು" ಎಂದು ಹೇಳಿದರು.