ಮಂಗಳೂರು: ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ -2023 ಕಿರೀಟ ಮುಡಿಗೇರಿಸಿಕೊಂಡ ಕುಳಾಯಿಯ ವಿದ್ಯಾರ್ಥಿನಿ
Saturday, September 30, 2023
ಮಂಗಳೂರು: ಥಾಯ್ಲ್ಯಾಂಡ್ ನಲ್ಲಿ ನಡೆದಿರುವ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಕುಳಾಯಿಯ ಯಶಸ್ವಿನಿ ದೇವಾಡಿಗ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ.
ಈ ಸ್ಪರ್ಧೆಯಲ್ಲಿ 15ಕ್ಕೂ ಅಧಿಕ ದೇಶಗಳ 50ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ನಾಲ್ಕು ದಿನಗಳ ಕಾಲ ಸ್ಪರ್ಧೆ ನಡೆದಿದ್ದು, ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳು ಅವರವರ ದೇಶದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಪ್ರದರ್ಶಿಸಿದ್ದರು. ಜೊತೆಗೆ ಸಾಂಪ್ರದಾಯಿಕ ಆಹಾರವನ್ನು ಪ್ರದರ್ಶಿಸಬೇಕಿತ್ತು. ಜೊತೆಗೆ ತಮ್ಮಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಬೇಕಿತ್ತು. ನಾಲ್ಕನೇ ದಿನ ಫೈನಲ್ ಹಂತದ ಸ್ಪರ್ಧೆ ನಡೆದಿತ್ತು.
ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆದ ಯಶಸ್ವಿನಿ ದೇವಾಡಿಗ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ. ಮಂಗಳೂರಿನ ಕುಳಾಯಿ ನಿವಾಸಿಯಾಗಿರುವ ಯಶಸ್ವಿನಿ ದೇವಾಡಿಗ ದೇವದಾಸ ದೇವಾಡಿಗ - ಮೀನಾಕ್ಷಿ ದೇವಾಡಿಗ ದಂಪತಿಯ ಪುತ್ರಿ. ಇವರು ಸುರತ್ಕಲ್ ಗೋವಿಂದದಾಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.