21 ವರ್ಷದ ಗರ್ಭಿಣಿ ಪತ್ನಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪತಿ- ರಾಜಸ್ಥಾನದಲ್ಲಿ ಬೆಚ್ಚಿ ಬೀಳಿಸುವ ಘಟನೆ
Sunday, September 3, 2023
ಜೈಪುರ : ಗರ್ಭಿಣಿ ಪತ್ನಿಯನ್ನು ಗಂಡನು ಗ್ರಾಮಸ್ತರ ಎದುರಿನಲ್ಲಿ ಸಂಪೂರ್ಣ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿರುವ ಘಟನೆ ರಾಜಸ್ಥಾನದ ಪ್ರತಾಪಗಢ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ 21 ವರ್ಷದ ಈ ಮಹಿಳೆಯ ಬೆತ್ತಲೆ ಮೆರವಣಿಗೆಯ ವಿಡಿಯೊ ಜಾಲತಾಣ- ಗಳಲ್ಲಿ ಹರಿದಾಡಿದ್ದು, ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತಪ್ಪಿತಸ್ಥ ಪತಿ ಸೇರಿದಂತೆ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆಗಾಗಿ ರಾಜಸ್ಥಾನ ಸರ್ಕಾರವು ಎಸ್‌ಐಟಿ ರಚಿಸಿದೆ.
ಸಂತ್ರಸ್ತ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ 10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಸಂತ್ರಸ್ತೆಗೆ ಸರ್ಕಾರಿ - ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. 'ಕೌಟುಂಬಿಕ ಕಲಹದಿಂದ ಮಹಿಳೆಯ ಮೇಲೆ ಎಸಗಿರುವುದು ದೌರ್ಜನ್ಯ ಅಮಾನವೀಯ. ಸರ್ಕಾರ ಇದನ್ನು ಸಹಿಸುವುದಿಲ್ಲ' ಎಂದು ಅವರು ಹೇಳಿದ್ದಾರೆ.
ವಿವಾಹೇತರ ಸಂಬಂದ- ಮದುವೆ ಬಳಿಕ ಪತಿ ಬಗ್ಗೆ ಅತೃಪ್ತಿಗೊಂಡಿದ್ದ ಸಂತ್ರಸ್ತೆಯು ಬೇರೊಬ್ಬರ ಜೊತೆ ಸಂಬಂಧ ಹೊಂದಿ ಆತನೊಟ್ಟಿಗೆಯೇ ವಾಸಿಸುತ್ತಿದ್ದರು. ಇದರಿಂದ ಪತಿ ಹಾಗೂ ಆತನ ಮನೆಯವರು ಕುಪಿತಗೊಂಡಿದ್ದರು. ಆಕೆಯನ್ನು ಅಪಹರಿಸಿ ಕೃತ್ಯ ನಡೆದಿರುವ ಗ್ರಾಮಕ್ಕೆ ಕರೆತಂದಿದ್ದ ಅವರು, ಗ್ರಾಮಸ್ತರ ಎದುರು ಥಳಿಸಿದ್ದರು. ಬಳಿಕ ಬೆತ್ತಲೆ ಮೆರವಣಿಗೆ ನಡೆಸಿದ್ದಾರೆ. ಗುರುವಾರ ಈ ಕೃತ್ಯ ನಡೆದಿದೆ' ಎಂದು ಡಿಜಿಪಿ
ಉಮೇಶ್ ಮಿಶ್ರಾ ತಿಳಿಸಿದ್ದಾರೆ.
ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಹೆಚ್ಚಿನ ತನಿಖೆಗಾಗಿ ADGP (ಅಪರಾಧ) ದಿನೇಶ್ ಅವರನ್ನು ಶುಕ್ರವಾರ ರಾತ್ರಿಯೇ ಗ್ರಾಮಕ್ಕೆ ಕಳುಹಿಸಲಾಗಿದೆ. ಸರ್ಕಾರವು ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಾಪಗಢ ಗ್ರಾಮದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿಸಿದ್ದಾರೆ.
ಇಂತಹ ಕೃತ್ಯ ಸಹಿಸುವುದಿಲ್ಲ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಬದ್ಧ. ಪ್ರಕರಣದ ವಿಚಾರಣೆಗೆ ತ್ವರಿತ ವಿಲೇವಾರಿ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ
ಅಶೋಕ್ ಗೆಹಲೋಟ್ ತಿಳಿಸಿದ್ದಾರೆ
ಜಾಲತಾಣಗಳಲ್ಲಿ ವಿಡಿಯೊ ಹರಿದಾಡುತ್ತಿದ್ದರೂ ಸರ್ಕಾರಕ್ಕೆ
ಇದರ ಅರಿವು ಇಲ್ಲ. ರಾಜಸ್ಥಾನಕ್ಕೆ ಕಳಂಕ ತರುವ ಈ ವಿಡಿಯೊವನ್ನು ಜನರು ಹಂಚಿಕೊಳ್ಳಬಾರದು ಎಂದು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ತಿಳಿಸಿದ್ದಾರೆ