ಕೇರಳದ ಓಣಂ ಬಂಪರ್ ಲಾಟರಿ 25 ಕೋಟಿ ಗೆದ್ದವರಿಗೆ ಬಿಗ್ ಶಾಕ್! ಹಣ ಸಿಗುವುದೇ ಅನುಮಾನ, ಕಾರಣವೇನು ಗೊತ್ತೇ?
ತಿರುವನಂತಪುರಂ: ಈ ಬಾರಿಯ 25 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದವರು ತಾವು ಕೋಟ್ಯಾಧೀಶರಾಗಿದ್ದೇವೆಂದು ಸಂಭ್ರಮದಲ್ಲಿದ್ದರು. ಆದರೆ ಇದೀಗ ಈ ಬಹುಮಾನದ ಹಣ ನೀಡಬಾರದು. ಅದನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ತಮಿಳುನಾಡು ಮೂಲದವರೊಬ್ಬರು ಕೇರಳ ಸಿಎಂಗೆ ದೂರು ಸಲ್ಲಿಸಿದ್ದಾರೆ.
ತಮಿಳುನಾಡಿನ ಬೃಂದಾ ಚಾರಿಟೇಬಲ್ ಟ್ರಸ್ಟ್ ಮಾಲಕರು ಈ ದೂರು ದಾಖಲಿಸಿದವರು. ತಮಿಳುನಾಡಿನ ಕಾಳಸಂತೆಯಲ್ಲಿ ಮಾರಾಟವಾದ ಟಿಕೆಟ್‌ಗೆ ಓಣಂ ಬಂಪರ್ ಬಹುಮಾನ 25 ಕೋಟಿ ರೂ. ಬಂದಿದೆ. ಕಾನೂನು ಪ್ರಕಾರ ಕೇರಳ ರಾಜ್ಯದ ಲಾಟರಿಗಳನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಬಾರದು ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಲಾಟರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ. ಕೇರಳದ ಬಾವಾ ಏಜೆನ್ಸಿಯಿಂದ ಕಮಿಷನ್ ಆಧಾರದಲ್ಲಿ ಪಡೆದ ಟಿಕೆಟ್‌ಗಳನ್ನು ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಾರಾಟ ಮಾಡಲಾಗಿದೆ. ಇದೀಗ ಅದಕ್ಕೆ ಪ್ರಥಮ ಬಹುಮಾನ ಬಂದಿದೆ. ಬಹುಮಾನದ ಹಣವನ್ನು ಧರ್ಮಕಾರ್ಯಕ್ಕೆ ಬಳಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
ಬಹುಮಾನ ವಿಜೇತರ ಬಗ್ಗೆ ತನಿಖೆ ನಡೆಸಲು ಲಾಟರಿ ಇಲಾಖೆಯಲ್ಲಿ ವಿಶೇಷ ಸಮಿತಿಯಿದ್ದು, ಎಲ್ಲ ವಿಧಾನಗಳನ್ನು ಅನುಸರಿಸಿದ ನಂತರವೇ ಬಹುಮಾನದ ಹಣವನ್ನು ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಓಣಂ ಬಂಪರ್‌ನ ಮೊದಲ ಬಹುಮಾನವನ್ನು ಕೋಯಿಕ್ಕೋಡ್‌ನ ಪಾಳಯಂನಲ್ಲಿರುವ ಬಾವಾ ಏಜೆನ್ಸಿಯಿಂದ ಮಾರಾಟ ಮಾಡಲಾದ TE 230662 ಟಿಕೆಟ್ ಪಡೆದುಕೊಂಡಿದೆ.
ತಮಿಳುನಾಡಿನ ತಿರುಪುರ್ ಮೂಲದ ಪಾಂಡ್ಯರಾಜ್, ಕುಪ್ಪುಸ್ವಾಮಿ ಮತ್ತು ಕೊಯಮತ್ತೂರು ಮೂಲದ ಸ್ವಾಮಿನಾಥನ್ ಮತ್ತು ರಾಮಸ್ವಾಮಿ ಜಂಟಿಯಾಗಿ ಲಾಟರಿ ಖರೀದಿಸಿದ್ದರು. ಅವರಿಗೆ ಪ್ರಥಮ ಬಹುಮಾನವಾಗಿ 25 ಕೋಟಿ ರೂಪಾಯಿ ಬಂದಿದ್ದು, ಕಾಳಸಂತೆಯಲ್ಲಿ ಟಿಕೆಟ್ ಖರೀದಿ ಮಾಡಿರುವ ಆರೋಪ ಇರುವ ಹಿನ್ನೆಲೆಯಲ್ಲಿ ಕಂಟಕ ಎದುರಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಹಣ ಸಿಗುವುದ ಅನುಮಾನವಾಗಿದೆ.