ಒಂದು ಇಲಿ ಹಿಡಿಯಲು ಬರೋಬ್ಬರಿ 41 ಸಾವಿರ ರೂ. ಖರ್ಚು!
Monday, September 18, 2023
ಲಖನೌ: ಉತ್ತರ ರೈಲ್ವೆಯ ಲಖನೌ ವಿಭಾಗವು ಒಂದು ಇಲಿ ಹಿಡಿಯಲು ಸರಾಸರಿ 41 ಸಾವಿರ ರೂ. ಹಣ ವೆಚ್ಚ ಮಾಡಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಇಲಿಗಳನ್ನು ಹಿಡಿಯಲು ಇಲಾಖೆ ಖರ್ಚು ಮಾಡಿದ ವಿವರಗಳ ಬಗ್ಗೆ ಮಾಹಿತಿ ಕೋರಿ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ RTI ಅರ್ಜಿಗೆ ಉತ್ತರ ನೀಡಿರುವ ಲಖನೌ ಉಪವಿಭಾಗ, 3 ವರ್ಷದಲ್ಲಿ ಇಲಿಗಳನ್ನು ಹಿಡಿಯಲು 69 ಲಕ್ಷ ರೂ. ವೆಚ್ಚ ಮಾಡಿದ್ದು, ಈ ಅವಧಿಯಲ್ಲಿ 168 ಇಲಿಗಳನ್ನು ಹಿಡಿದಿರುವುದಾಗಿ ತಿಳಿಸಿದೆ. ಅಂದರೆ ಒಂದು ಇಲಿ ಹಿಡಿಯಲು ಸರಾಸರಿ 41,071 ರೂ. ಮೊತ್ತ ಖರ್ಚು ಮಾಡಿದಂತಾಗಿದೆ !
ರೈಲ್ವೆ ಲಖನೌ ವಿಭಾಗ ಇಲಿಗಳನ್ನು ಹಿಡಿಯಲು 69 ಲಕ್ಷರೂ. ವೆಚ್ಚ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಬೃಹತ್ ಭ್ರಷ್ಟಾಚಾರದ ಆರೋಪ ಮಾಡಿದೆ. “ಕೇವಲ ಒಂದು ವಿಭಾಗದಲ್ಲಿ ಇಷ್ಟೊಂದು ವ್ಯವಹಾರ ನಡೆದಿರಬೇಕಾದರೆ, ಉಳಿದ ವಿಭಾಗದಲ್ಲಿ ಎಷ್ಟೆಲ್ಲ ಅಕ್ರಮ ಎಸಗಲಾಗಿದೆಯೋ?,'' ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಪ್ರಶ್ನೆಯನ್ನು ಮಾಡಿದ್ದಾರೆ.