55 ವರ್ಷಗಳಲ್ಲಿ ಲಾಟರಿಗಾಗಿಯೇ 12ಲಕ್ಷ ವ್ಯಯಿಸಿದ ವ್ಯಕ್ತಿ: ಮೊದಲ ಬಾರಿಗೆ ಬಂದಿರುವ ಬಹುಮಾನದ ಮೊತ್ತ ನೋಡಿ ಖರೀದಿದಾರ ಶಾಕ್
ಪಟ್ಟಣಂತಿಟ್ಟ: ಬರೋಬ್ಬರಿ 25 ಕೋಟಿ ರೂ. ಬಹುಮಾನವಿರುವ ಓಣಂ ಬಂಪರ್ ಲಾಟರಿ ಫಲಿತಾಂಶ ಸೆ.22ರಂದು ಘೋಷಣೆಯಾಯಿತು. 75 ಲಕ್ಷಕ್ಕೂ ಅಧಿಕ ಮಂದಿ ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದರು. ತಮಿಳುನಾಡಿನ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ. ಟಿಕೆಟ್ವೊಂದಕ್ಕೆ 500 ರೂ. ಪಾವತಿಸಿ ಯಾವ ಬಹುಮಾನವನ್ನು ಪಡೆಯದ ಅನೇಕರು ನಿರಾಶರಾಗಿದ್ದು ಇದೆ. ಆದರೆ, ಪಟ್ಟಣಂತಿಟ್ಟ ಮೂಲದ ರಾಜನ್ ಮಾತ್ರ ನಿರಾಶರಾಗಿಲ್ಲ.
ರಾಜನ್ ನಿವೃತ್ತ ಸರ್ಕಾರಿ ನೌಕರರು. ಕಳೆದ 55 ವರ್ಷಗಳಲ್ಲಿ ಲಾಟರಿ ಟಿಕೆಟ್ಗಾಗಿಯೇ ಅವರು ಸುಮಾರು 12 ಲಕ್ಷ ರೂಪಾಯಿ ವ್ಯಯಿಸಿದ್ದಾರೆ. ಐದು ದಶಕಗಳಿಗೂ ಅಧಿಕ ಕಾಲ ಲಾಟರಿ ಖರೀದಿ ಮಾಡಿದ ರಾಜನ್ ಈ ಬಾರಿ ಕೇವಲ 500 ರೂಪಾಯಿ ಗೆದ್ದಿದ್ದಾರೆ.
ರಾಜನ್ ಈ ಬಾರಿ 9 ಸಾವಿರ ರೂ. ಖರ್ಚು ಮಾಡಿ 18 ಓಣಂ ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಅವರಿಗೆ ಕೇವಲ 500 ರೂಪಾಯಿ ಬಹುಮಾನ ಬಂದಿದೆ. ಇದುವರೆಗೂ ರಾಜನ್ ಒಂದೂವರೆ ಲಕ್ಷ ಲಾಟರಿ ಟಿಕೆಟ್ಗಳನ್ನು ಖರೀದಿ ಮಾಡಿದ್ದಾರೆ. ಒಮ್ಮೆಯೂ ಬಹುಮಾನ ಬಂದಿರಲಿಲ್ಲ. ಮೊದಲ ಬಾರಿಗೆ ಬಹುಮಾನ ಬಂದಿದೆ. ಆದರೆ, ಕೇವಲ 500 ರೂಪಾಯಿ.
ಕೇವಲ 500 ರೂ. ಬಂದರೂ ಬೇಸರಿಸಿಕೊಳ್ಳದ ರಾಜನ್, ಲಾಟರಿ ಟಿಕೆಟ್ಗಳ ಖರೀದಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ನನ್ನ ಕೈಯಲ್ಲಿ ಸಾಧ್ಯವಾಗುವಷ್ಟ ದಿನ ಲಾಟರಿ ಖರೀದಿ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.