ಮಂಗಳೂರು: 90ಲಕ್ಷ ಮೌಲ್ಯದ ಅಂಬರ್ ಗ್ರೀಸ್ ಹೊಂದಿದ್ದ ಮೂವರು ಆರೋಪಿಗಳು ಅರೆಸ್ಟ್
Monday, September 11, 2023
ಮಂಗಳೂರು: ನಗರದ ಪಣಂಬೂರು ಬೀಚ್ ಬಳಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಹೊಂದಿರುವ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 90ಲಕ್ಷ ರೂ. ಮೌಲ್ಯದ ಅಂಬರ್ ಗ್ರೀಸ್ ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಸಾಲಿಗ್ರಾಮ ಗ್ರಾಮದ ನಿವಾಸಿ ಜಯಕರ (39) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ನಿವಾಸಿ ಆದಿತ್ಯ (25), ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕು ನಿವಾಸಿ ಲೋಹಿತ್ ಕುಮಾರ್ ಗುರಪ್ಪನವರ್ (39) ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಪಣಂಬೂರು ಬೀಚ್ ಬಳಿ ಇಂದು ದಾಳಿ ನಡೆಸಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಹೊಂದಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಬರ್ ಗ್ರೀಸ್ ಅಪರೂಪದ ವನ್ಯಜೀವಿ ಉತ್ಪನ್ನವಾಗಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯುಳ್ಳದ್ದಾಗಿದೆ. ಪೊಲೀಸರು ಆರೋಪಿಗಳಿಂದ 900 ಗ್ರಾಂ ತೂಕದ 90 ಲಕ್ಷ ರೂ. ಮೌಲ್ಯದ ಅಂಬರ್ ಗ್ರೀಸ್ ಅನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.