ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ಪರಿಚಿತಳಾದ ಅಪರಿಚಿತೆಯಿಂದ ಬರೋಬ್ಬರಿ 99ಲಕ್ಷ ಕಳೆದುಕೊಂಡ ಸಾಫ್ಟ್‌ವೇರ್ ಇಂಜಿನಿಯರ್
Saturday, September 23, 2023
ಶಿವಮೊಗ್ಗ: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಿತಳಾದ ಅಪರಿಚಿತೆ ಕಳುಹಿಸಿರುವ ಲಿಂಕ್ ಕ್ಲಿಕ್ ಮಾಡಿ ಶಿವಮೊಗ್ಗದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಬರೋಬ್ಬರಿ 99 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ವರದಿಯಾಗಿದೆ.
ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಸ್ವಪ್ನಾ ಎಂಬಾಕೆಯ ಪರಿಚಯವಾಗಿದೆ. ಇಬ್ಬರೂ ವಾಟ್ಸ್ಆ್ಯಪ್ ನಲ್ಲಿ ಚಾಟಿಂಟ್ ಮಾಡುತ್ತಿದ್ದರು. ಸ್ವಪ್ನಾ ತಾನು ಲಂಡನ್‌ನಲ್ಲಿ ವಾಸವಾಗಿದ್ದು, ತನ್ನ ಚಿಕ್ಕಪ್ಪ ವಾಲ್‌ಸ್ಪೀಟ್‌ನಲ್ಲಿ ಮಾರ್ಕೆಟ್ ಅನಾಲಿಸ್ಟ್ ಎಂದು ತಿಳಿಸಿದ್ದಳು. ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ನಂಬಿಸಿದ್ದಳು ಎಂದು ಆರೋಪಿಸಲಾಗಿದೆ.
ಹೆಚ್ಚು ಸಂಪಾದನೆಯ ಆಸೆ ಮೂಡಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಒಂದು ಲಿಂಕ್ ಕಳುಹಿಸಿದ್ದಾಳೆ. ಅದರಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿ, ಕಸ್ಟಮರ್ ಸಪೋರ್ಟ್ ನಂಬರ್ ಎಂದು ದೂರವಾಣಿ ಸಂಖ್ಯೆಯನ್ನು ನೀಡಿದ್ದಾಳೆ. ಕಸ್ಟಮರ್ ಸಪೋರ್ಟ್ ನಂಬರ್‌ಗೆ ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯು ಹಣ ಹೂಡಿಕೆ ಕುರಿತು ತಿಳಿಸಿದ್ದ. ಅದರಂತೆ ಸಾಫ್ಟ್‌ವೇರ್ ಇಂಜಿನಿಯರ್, ವಿವಿಧ ಬ್ಯಾಂಕ್ ಖಾತೆಯಿಂದ 99,03,000 ರೂ. ನಗದು ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿದ ದೂರು ನೀಡಿದ್ದಾರೆ.