ಮಂಗಳೂರು: ಸರಣಿ ಅಪಘಾತದಲ್ಲಿ ಅಪ್ಪಚ್ಚಿಯಾದ ಕಾರು - ಗಂಭೀರ ಗಾಯಗೊಂಡ ಚಾಲಕ
Saturday, September 9, 2023
ಮಂಗಳೂರು: ನಗರದ ರಾ.ಹೆ.66 ರ ಜಪ್ಪಿನಮೊಗರುವಿನಲ್ಲಿ ಶನಿವಾರ ಮಧ್ಯಾಹ್ನ ನಡೆದ ಸರಣಿ ಅಪಘಾತದಲ್ಲಿ ಕಾರು ಅಪ್ಪಚ್ಚಿಯಾಗಿ ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಮಿನಿ ಲಾರಿ, ಕಾರು, ಬಸ್ ನಡುವೆ ಈ ಸರಣಿ ಅಪಘಾತ ನಡೆದಿದೆ. ಲಾರಿ ಹಾಗೂ ಬಸ್ ನಡುವೆ ಅಪ್ಪಚ್ಚಿಯಾಗಿದ್ದ ಕಾರಿನ ಗಾಯಾಳು ಚಾಲಕನನ್ನು ಸ್ಥಳೀಯರು ಮತ್ತು ವಾಹನ ಸವಾರರು ಹೊರಗೆಳೆದು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಪ್ಪಿನಮೊಗರುವಿನ ಹೆದ್ದಾರಿಯಲ್ಲಿ ತಲಪಾಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಮಿನಿ ಲಾರಿ ಕಾರೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಈ ವೇಳೆ ಲಾರಿ ಹಿಂದೆ ಚಲಿಸುತ್ತಿದ್ದ ಕಾರೊಂದು ಹಠತ್ತನೆ ಬ್ರೇಕ್ ಹೊಡೆದು ನಿಂತಿದೆ. ಈ ಕಾರಿಗೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೇರಳ ಸರಕಾರಿ ಸಾರಿಗೆ ಬಸ್ ಬಲವಾಗಿ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಎದುರಲ್ಲಿ ನಿಂತಿದ್ದ ಲಾರಿಗೆ ಅಪ್ಪಳಿಸಿ ಅಪ್ಪಚ್ಚಿಯಾಗಿದೆ.
ಈ ಕಾರಿನಲ್ಲಿ ತಲಪಾಡಿ ನಿವಾಸಿ ಮಂಗಳೂರಿನ ಎಂಸಿಎಫ್ ಉದ್ಯೋಗಿ ಚಾಲಕ ದಿನೇಶ್ ಎಂಬವರು ಸಿಲುಕಿದ್ದರು. ತಕ್ಷಣ ಸ್ಥಳೀಯರು ಮತ್ತು ವಾಹನ ಸವಾರರು ಹರಸಾಹಸ ಪಟ್ಟು ಹೊರಗೆಳೆದು ಆಸ್ಪತ್ರೆ ಸೇರಿಸಿದ್ದಾರೆ. ಸ್ಥಳೀಯ ಮನೆಯೊಂದರ ಸಿಸಿಟಿವಿಯಲ್ಲಿ ಘಟನೆಯ ವೀಡಿಯೋ ದಾಖಲಾಗಿದೆ. ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.