ಕಾಸರಗೋಡು: ಭೀಕರ ಅಪಘಾತದಲ್ಲಿ ಮೂವರು ಸಹೋದರಿಯರ ಸಹಿತ ಐವರು ಮೃತ್ಯು
Tuesday, September 26, 2023
ಮಂಗಳೂರು: ಕಾಸಗೋಡು ಜಿಲ್ಲೆಯ ಚೇರ್ಕಳ-ಅಡ್ಕಸ್ಥಳ ರಾಜ್ಯ ಹೆದ್ದಾರಿಯ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ಶಾಲಾ ಬಸ್ ಹಾಗೂ ಆಟೋ ರಿಕ್ಷಾ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸಹೋದರಿಯರು ಸೇರಿದಂತೆ ಐವರು ಮೃತಪಟ್ಟ ದಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.
ಕಾಸರಗೋಡು ಸಮೀಪದ ಮೊಗ್ರಾಲ್ ಪುತ್ತೂರು ನಿವಾಸಿ ಆಟೊ ಚಾಲಕ ಯು.ಎಚ್.ಅಬ್ದುಲ್ ರವೂಫ್ (48), ಮೊಗ್ರಾಲ್ ಪುತ್ತೂರಿನ ಮೊಗರು ನಿವಾಸಿಗಳಾದ ಬೀಫಾತಿಮಾ(50), ಇಸ್ಮಾಯೀಲ್, ಪತ್ನಿ ಉಮ್ಮಲಿಮಾ(50), ಬೆಳ್ಳೂರು ನಿವಾಸಿ ನಬೀಸಾ(49) ಹಾಗೂ ಫಾತಿಮಾ(60) ಮೃತಪಟ್ಟ ದುರ್ದೈವಿಗಳು.
ಮೃತರ ಪೈಕಿ ಮೂವರು ಸಹೋದರಿಯರಾಗಿದ್ದರೆ. ಶೇಕ್ ಅಲಿಯ ಪತ್ನಿ ಬೀಫಾತಿಮ ಮೃತರ ಸಂಬಂಧಿಕರಾಗಿದ್ದಾರೆ. ಅಪಘಾತದ ತೀವ್ರತೆಗೆ ನಾಲ್ವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ರವೂಫ್ ಕಾಸರಗೋಡಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪೆರ್ಲ ಕಡೆಗೆ ತೆರಳುತ್ತಿದ್ದ ಹಾಗೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಬರುತ್ತಿದ್ದ ಶಾಲಾ ಬಸ್ ಮುಖಾಮುಖಿ ಡಿಕ್ಕಿಯಾಗಿ ಸೋಮವಾರ ಸಂಜೆ 5:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಆಟೋರಿಕ್ಷಾ ನಜ್ಜುಗುಜ್ಜಾಗಿದ್ದು ಬದಿಯಡ್ಕ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.