ಆಳ್ವಾಸ್ 'ಸಮನ್ವಯ 2023': ಸಿ.ಎ.ಗೆ ಉನ್ನತ ಸಾಮಾಜಿಕ ಗೌರವ- ಹಂಚಾಟೆ
ಆಳ್ವಾಸ್ 'ಸಮನ್ವಯ 2023': ಸಿ.ಎ.ಗೆ ಉನ್ನತ ಸಾಮಾಜಿಕ ಗೌರವ- ಹಂಚಾಟೆ
ಗಣ್ಯರು, ಜನಪ್ರಿಯ ವ್ಯಕ್ತಿಗಳ ಸಹಿಗಾಗಿ ಜನ ಓಡಿಬಂದರೆ, ಜನಪ್ರಿಯ ವ್ಯಕ್ತಿಗಳು ಲೆಕ್ಕ ಪರಿಶೋಧಕರ (ಸಿ.ಎ.) ಸಹಿಗಾಗಿ ಕಾದು ನಿಲ್ಲುತ್ತಾರೆ. ಸಿಎ ಪದವೀಧರರಿಗೆ ಉನ್ನತವಾದ ಸಾಮಾಜಿಕ ಗೌರವ ಇದೆ ಎಂದು ಇಳಕಲ್‍ನ ಪ್ರಸಿದ್ಧ ಟ್ಯಾಕ್ಸ್ ಪ್ರಾಕ್ಟೀಷನರ್ ಪ್ರಶಾಂತ್ ವಿ. ಹಂಚಾಟೆ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ವಾಣಿಜ್ಯ (ವೃತ್ತಿಪರ) ವಿಭಾಗದ CA ಫೌಂಡೇಶನ್/ CA ಇಂಟರ್‍ಮೀಡಿಯೆಟ್ ಕೋರ್ಸ್ ಸಹಯೋಗದಲ್ಲಿ ನಡೆದ ಕೋರ್ಸ್ ಅಭಿವಿನ್ಯಾಸ, ಅಭಿನಂದನೆ ಹಾಗೂ ಪುಸ್ತಕ ಬಿಡುಗಡೆಯ ‘ಸಮನ್ವಯ 2023’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈದ್ಯರು, ಶಿಕ್ಷಕರು, ಕೂಲಿಕಾರರು ಸೇರಿದಂತೆ ಎಲ್ಲರಿಗೂ ಲೆಕ್ಕ ಬೇಕು. ಹೀಗಾಗಿ ವಾಣಿಜ್ಯ ಪದವಿ ಶ್ರೇಷ್ಠ ಎಂದ ಅವರು, ಪಾರ್ಥ ಬಿಲ್ವಿದ್ಯೆ ಗೊತ್ತಿದ್ದರಿಂದ ಪಾಂಡವರಲ್ಲಿ ಶ್ರೇಷ್ಠನಾದ. ಅದೇ ರೀತಿ ಸಿಎ ಪದವೀಧರರು ಸಮಾಜದಲ್ಲಿ ಉನ್ನತ ಸ್ಥರದಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ವಾಣಿಜ್ಯ ಪದವೀಧರರು ನಿರುದ್ಯೋಗಿಗಳಾದ ಉದಾಹರಣೆ ಇಲ್ಲ. ಸಿಎ ಮಾಡಿದವರಲ್ಲಿ ವಾಣಿಜ್ಯ ಶಿಸ್ತು ಇರುತ್ತದೆ. ಧನಾತ್ಮಕ ಭಾವ ಹೊಂದಿರಬೇಕು ಎಂದು ಅವರು ಹೇಳಿದರು.
ಯಾವುದೇ ನೆಪ ಹೇಳದೇ ಸವಾಲನ್ನು ಸ್ವೀಕರಿಸಿ ಮುಂದಡಿ ಇಡಬೇಕು. ಆಗ ಗೆಲುವು ಸಾಧ್ಯ. ಯಾರ ಬಗ್ಗೆಯೂ ದೂರು ಬೇಡ, ಅಭಿನಂದಿಸಿ. ಟೀಕೆ ಮಾಡದೇ ತಪ್ಪು ತಿದ್ದಿಕೊಳ್ಳಿ. ತಾಳ್ಮೆ , ಪರಿಪಕ್ವತೆ, ಸತ್ಯ ಹಾಗೂ ಉತ್ತಮ ಸಂವಹನದಿಂದ ಯಶಸ್ಸು ಸಾಧ್ಯ ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳ ಸಾಧನೆಯನ್ನು ಅತಿ ಹೆಚ್ಚು ಸಂಭ್ರಮಿಸುವವರು ಶಿಕ್ಷಕರು. ಆಳ್ವಾಸ್‍ನಲ್ಲಿ ಜ್ಞಾನದ ಹಸಿವು, ಓದಿನ ಹಠ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದರಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪಾತ್ರ ಹಿರಿದು ಎಂದರು.
ಆಳ್ವಾಸ್ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಾವು ಆಳ್ವಾಸ್‍ನಲ್ಲಿ ವಿದ್ಯೆ ಜೊತೆ ಮನಸ್ಸು ಕಟ್ಟುವ ಕೆಲಸ ಮಾಡುತ್ತೇವೆ. ಪ್ರೇರಣೆ ಎಂಬುದು ಅಂತರಂಗದಿಂದ ಮೂಡಬೇಕು. ಬದುಕಿನಲ್ಲಿ ತಾಳ್ಮೆ ಅತಿ ಅಗತ್ಯ. ಸಾಧನೆಯ ಗುರಿ ಇರಬೇಕು. ಭವಿಷ್ಯದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಅತಿದೊಡ್ಡ ಲೆಕ್ಕಪರಿಶೋಧನಾ ಸಂಸ್ಥೆಗಳನ್ನು ರೂಪಿಸಬೇಕು ಎಂದರು.
ಎಸ್‍ಐಸಿಎಎಸ್‍ಎ (ಸಿಕಾಸಾ ಮಂಗಳೂರು) ಅಧ್ಯಕ್ಷರಾದ ಲೆಕ್ಕಪರಿಶೋಧಕಿ ಮಮತಾ ರಾವ್ ಮಾತನಾಡಿ, ನೀವು ಜೀವನದಲ್ಲಿ ಹೊಂದುವ ಬದ್ಧತೆ ಹಾಗೂ ಕೆಲಸದ ಪ್ರಸ್ತುತಿ ಯಶಸ್ಸಿಗೆ ಬಹುಮುಖ್ಯ. ಎಸ್‍ಐಸಿಎಎಸ್‍ಎ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಆರ್ಟಿಕಲ್‍ಶಿಫ್‍ಗೆ ಅವಕಾಶ ನೀಡುತ್ತದೆ. ಓದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ನಮ್ಮ ಮನಸ್ಸು ಯಾವ ಪರಿಸರದಲ್ಲಿ ಇರುತ್ತದೆಯೋ ಅದರ ಉತ್ಪನ್ನ ನಾವು. ತಂದೆ-ತಾಯಿಯನ್ನು ಗೌರವಿಸಿ. ನಿಮ್ಮ ಆಕಾಂಕ್ಷೆ ಮತ್ತು ಕ್ರಿಯೆಗಳ ನಡುವೆ ಸಂಬಂಧ ಇರಬೇಕು. ಯಾವಾಗಲೂ ಪಡೆಯುವುದಕ್ಕಿಂತ ನೀಡುವುದಕ್ಕೆ ಗಮನ ಹರಿಸಿ ಎಂದರು.
ಸಿಎ ಫೌಂಡೇಶನ್ ಸಂಯೋಜಕ ಅನಂತಶಯನ ಅವರು ಬರೆದ ‘ಅಕೌಂಟಿಂಗ್ ಫಾರ್ ಸಿಎ ಫೌಂಡೇಶನ್- ನ್ಯೂ ಸಿಲೆಬಸ್ ಮಾಡ್ಯೂಲ್ 1 & 2’ ಪ್ರಶಾಂತ್ ವಿ. ಹಂಚಾಟೆ ಬಿಡುಗಡೆ ಮಾಡಿದರು.
ಆಳ್ವಾಸ್ ಹಿರಿಯ ವಿದ್ಯಾರ್ಥಿನಿ ಆರುಷಿ (ಸಿ.ಎ.) ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಳೆದ ಜೂನ್‌ನಲ್ಲಿ ಸಿಎ ಫೌಂಡೇಷನ್ ಉತ್ತೀರ್ಣರಾದ 76 ವಿದ್ಯಾರ್ಥಿಗಳು ಹಾಗೂ ಮೇ ತಿಂಗಳಲ್ಲಿ ಸಿಎ ಇಂಟರ್‍ಮಿಡಿಯೇಟ್ ಪಾಸಾದ 37 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
CA ಫೌಂಡೇಶನ್ ಸಂಯೋಜಕ ಅನಂತಶಯನ ಸ್ವಾಗತಿಸಿದರು. ಸಾಕ್ಷಿ ಹೆಗ್ಡೆ, ಸಿಂಚನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ ಮಿಥಾಲಿ ಧನ್ಯವಾದ ಸಮರ್ಪಿಸಿದರು.