ಹಸುಗೂಸಿನ ಎದುರೇ ಮಹಿಳೆಯ ಥಳಿಸಿದ ಕಿರಾತಕರು - ವೀಡಿಯೋ ವೈರಲ್ ಬೆನ್ನಲ್ಲೇ ಆರೋಪಿಗಳು ಅಂದರ್
Saturday, September 2, 2023
ಭೋಪಾಲ್: ಮಧ್ಯಪ್ರದೇಶದ ಸಾಗರ್ ನಗರದಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬಳಿಗೆ ಆಕೆಯ 5 ತಿಂಗಳು ಹಸುಗೂಸು ಮಲಗಿರುವಾಗಲೇ ಬರ್ಬರವಾಗಿ ಥಳಿಸಿ ಎಳೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ. ಇದೀಗ ಅದರ ವೀಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕ್ರಮಕೈಗೊಂಡು ಮೂವರನ್ನು ಬಂಧಿಸಿದ್ದಾರೆ.
ಮಹಿಳೆ ಮಾನಸಿಕ ಅಸ್ವಸ್ಥತೆ ಹೊಂದಿದ್ದಾಳೆಂದು ತಿಳಿಯಲಾಗಿದೆ. ಆಕೆಗೆ ನಿರ್ದಾಕ್ಷಿಣ್ಯವಾಗಿ ಕೋಲಿನಿಂದ ಹೊಡೆದು ಮುಖಕ್ಕೆ ಒದೆಯುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.
ಬಂಧಿತರನ್ನು ಪ್ರವೀಣ್ ರಾಯ್ಕರ್ (26), ವಿಕ್ಕಿಯಾದವ್ (20) ಮತ್ತು ರಾಕೇಶ್ ಪ್ರಜಾಪತಿ (40) ಎಂದು ಗುರುತಿಸಲಾಗಿದೆ. ಬಂಧಿತರನ್ನು ರಸ್ತೆಯಲ್ಲಿಯೇ ಮೆರವಣಿಗೆ ಮಾಡಿ ನಂತರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಘಟನೆ ಆಗಸ್ಟ್ 12ರ ರಾತ್ರಿ ನಡೆದಿತ್ತು. ಮಧ್ಯವಯಸ್ಕ ಮಹಿಳೆ ಬಸ್ ನಿಲ್ದಾಣದ ಕ್ಯಾಂಟೀನಿಗೆ ಹಾಲು ಖರೀದಿಸಲೆಂದು ಹೋಗಿದ್ದಳು. ಆಗ ಆರೋಪಿಗಳು ಆಕೆಯನ್ನು ಥಳಿಸಿದ್ದರು. ಆಗ ಆಕೆ ಅವರ ಬಳಿ “ಭೈಯ್ಯಾ, ಭೈಯ್ಯಾ' ಎಂದು ಹೊಡೆಯದಂತೆ ಗೋಗರೆಯುತ್ತಿದ್ದಳು. ಆಗ ಆಕೆಯ ಮಗು ನೆಲದಲ್ಲಿ ಮಲಗಿರುವುದು ಕಾಣಿಸುತ್ತದೆ. ಸುತ್ತಲಿದ್ದ ಜನರು ಆಕೆಗೆ ಹೊಡೆಯದಂತೆ ಆರೋಪಿಗಳಿಗೆ ಸೂಚಿಸುತ್ತಿರುವುದೂ ಕಾಣಿಸುತ್ತದೆ.
ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.