ಮಹಿಳೆಯೊಂದಿಗೆ ಸಲುಗೆ ಬೆಳೆಸಿ, ಫೋಟೋ ತೆಗೆದು ಬ್ಲ್ಯಾಕ್ಮೇಲ್ : ಸುಬ್ರಹ್ಮಣ್ಯ ಗ್ರಾಪಂ ಮಾಜಿ ಸದಸ್ಯ ಅರೆಸ್ಟ್
Friday, September 29, 2023
ಪುತ್ತೂರು: ವಿವಾಹಿತೆಯೊಂದಿಗೆ ಸಲುಗೆ ಬೆಳೆಸಿಕೊಂಡು, ಆಕೆಯೊಂದಿಗೆ ಫೋಟೊ ತೆಗೆದು ಬ್ಲಾಕ್ಮೇಲ್ ಮಾಡಿರುವ ಪ್ರಕರಣದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಆರ್ಲಪದವು ನಿವಾಸಿ ಪ್ರಶಾಂತ ಭಟ್ ಮಾಣಿಲ(35) ಬಂಧಿತ ಆರೋಪಿ.
ಪ್ರಶಾಂತ ಭಟ್ ಸುಬ್ರಹ್ಮಣ್ಯ ಪರಿಸರದಲ್ಲಿ ಸಾಮಾಜಿಕ ಹಾಗೂ ರಾಜಕೀಯವಾಗಿ ತೊಡಗಿಸಿಕೊಂಡಿದ್ದ. ಈತನಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ವಿವಾಹಿತ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಆಗಿದ್ದಾರೆ. ಆಕೆಗೆ ಪ್ರಶಾಂತ ಭಟ್ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಹೇಳಿ ನಂಬಿಸಿ ಸಲುಗೆ ಬೆಳೆಸಿಕೊಂಡಿದ್ದ.
ಕಳೆದ ಜನವರಿಯಲ್ಲಿ ಶಿರಸಿಗೆ ತೆರಳಿದ್ದ ಪ್ರಶಾಂತ ಭಟ್, ಅಲ್ಲಿ ಆಕೆಯನ್ನು ಲಾಡ್ಜ್ ಗೆ ಕರೆಸಿಕೊಂಡಿದ್ದ, ಅಲ್ಲದೆ ಜೊತೆಗೆ ಸುತ್ತಾಟವನ್ನೂ ಮಾಡಿದ್ದರು. ಈ ವೇಳೆ, ಮಹಿಳೆಯೊಂದಿಗೆ ಫೋಟೊ ತೆಗೆಸಿಕೊಂಡಿದ್ದು ಅನಂತರ ಅದನ್ನು ಮುಂದಿಟ್ಟು ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದಾನೆ. ಲಾಡ್ಜ್ ನಲ್ಲಿ ತೆಗೆದಿರುವ ಫೋಟೊವನ್ನು ಆಕೆಯ ಪತಿಗೆ ತೋರಿಸುತ್ತೇನೆ, ತಾಯಿಗೆ ಕಳಿಸುತ್ತೇನೆಂದು ಹೇಳಿ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದಾನೆ. ಅಲ್ಲದೆ ಮೊಬೈಲಿನಲ್ಲಿ ನಗ್ನವಾಗಿ ದೇಹ ತೋರಿಸುವಂತೆ ಒತ್ತಡ ಹಾಕುತ್ತಿದ್ದ. ಈ ನಡುವೆ, ಪ್ರಶಾಂತ ಭಟ್ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗುತ್ತಿದ್ದು ಹಣ ನೀಡದೇ ಇದ್ದಾಗ ಫೋಟೊಗಳನ್ನು ಯುವತಿಯ ತಾಯಿಗೆ ಕಳಿಸಿದ್ದಾನೆ.
ಇದರಿಂದ ಬೇಸತ್ತ ಮಹಿಳೆ ಕಾರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿ ಪ್ರಶಾಂತ ಭಟ್ ನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಪ್ರಶಾಂತ್ ಭಟ್ ಈ ಹಿಂದೆ ಸುಬ್ರಹ್ಮಣ್ಯದಲ್ಲಿ ಮಠದ ವಿರುದ್ಧ ಹೋರಾಟ ನಡೆಸಿದ್ದವರಲ್ಲಿ ಪ್ರಮುಖನಾಗಿದ್ದ.