ತಾಯಿ - ಮಗನ ಜೋಡಿಕೊಲೆಗೆ ಟ್ವಿಸ್ಟ್ : ಪ್ರಿಯಕರನಿಂದಲೇ ಪ್ರೇಯಸಿ, ಆಕೆಯ ಪುತ್ರನ ಹತ್ಯೆ
Friday, September 8, 2023
ಬೆಂಗಳೂರು: ಬಾಗಲಗುಂಟೆ ಠಾಣಾ ವ್ಯಾಪ್ತಿಯ ರವೀಂದ್ರನಾಥ ಗುಡ್ಡೆಯಲ್ಲಿ ನಡೆದಿದ್ದ ತಾಯಿ - ಮಗನ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶೇಖರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನವನೀತಾ (35) ಹಾಗೂ ಸಾಯಿ ಸೃಜನ್ (8) ನನ್ನು ಹತ್ಯೆ ಮಾಡಿರುವ ಆರೋಪಿ ಶೇಖರ್ ಎಂಬುವನನ್ನು ನಗರದ ಬಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ನವನೀತಾ ಪತಿಯನ್ನು ತೊರೆದು ಪುತ್ರನೊಂದಿಗೆ 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ಸಂದರ್ಭ ಆಕೆಗೆ ಆರೋಪಿ ಶೇಖರ್ ಪರಿಚಯವಾಗಿದ್ದಾನೆ. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಆದರೆ ಇತ್ತೀಚಿಗೆ ನವನೀತಾ, ಶೇಖರ್ ನನ್ನು ತೊರೆದು ಲೋಕೇಶ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು. ಪರಿಣಾಮ ಸಿಟ್ಟಿಗೆದ್ದ ಶೇಖರ್, ಲೋಕೇಶ್‌ನ ಸಹವಾಸ ನಿಲ್ಲಿಸುವಂತೆ ನವನೀತಾಳಿಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ಆಕೆ ಲೋಕೇಶ್ ಜೊತೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.
ಸೆ.4ರಂದು ಎಂದಿನಂತೆ ನವನೀತಾಳ ಮನೆಗೆ ಬಂದಿದ್ದ ಶೇಖರ್ ಆಕೆಯ ಪುತ್ರನನ್ನು ಮನೆಯಿಂದ ಆಚೆ ಕಳುಹಿಸಿ ಆಕೆಯೊಂದಿಗೆ ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ಚಾಕುವಿನಿಂದ ಆಕೆಯ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಮನೆಗೆ ಬಂದ ನವನೀತಾಳ ಪುತ್ರನಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆಂದು ನಂಬಿಸಿ ಆತನ ಎರಡೂ ಕೈಕಾಲುಗಳನ್ನು ಕಟ್ಟಿದ್ದಾನೆ. ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮೃತದೇಹಗಳನ್ನು ರೂಮಿನಲ್ಲಿ ಮಂಚದ ಮೇಲೆ ಬಿಟ್ಟು ಪರಾರಿಯಾಗಿದ್ದಾನೆಂದು ಎಂದು ಹೇಳಲಾಗಿದೆ.
ಈ ಘಟನೆ ಸಂಬಂಧ ಮೃತಳ ತಾಯಿ ನೀಡಿರುವ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಬೇರಡೆಯಿದ್ದ ಆಕೆಯ ಪತಿ ಚಂದ್ರುವೇ ಮನೆಗೆ ಬಂದು ಹತ್ಯೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡದೊಂದಿಗೆ ತನಿಖೆ ಕಾರ್ಯಾಚರಣೆ ಕೈಗೊಂಡಾಗ ಸತ್ಯ ಬಯಲಾಗಿದ್ದು, ಆರೋಪಿ ಶೇಖರ್ ನನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.