ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಶಿಕ್ಷಕನಿಗೆ ಥಳಿಸಿ, ಮುಖಕ್ಕೆ ಮಸಿ ಬಳಿದ ಕುಟುಂಬಸ್ಥರು
Tuesday, September 19, 2023
ರಾಜಸ್ಥಾನ: ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಆರೋಪದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನನ್ನು ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಾಜಸ್ಥಾನದ ಗಂಗಾನಗರದಲ್ಲಿ ವರದಿಯಾಗಿದೆ.
ತಮ್ಮ ಪುತ್ರಿಗೆ ಕಿರುಕುಳ ನೀಡುತ್ತಿದ್ದ ಎಂದ ಆರೋಪಿಸಿದ ಪೋಷಕರು, ಶಿಕ್ಷಕನನ್ನು ಮನಬಂದಂತೆ ಥಳಿಸಿದ್ದಾರೆ. ಶಿಕ್ಷಕನ ಬಟ್ಟೆ ಹರಿಯುವಂತೆ ಥಳಿಸಿರುವ ಕುಟುಂಬಸ್ಥರು, ಬಳಿಕ ಆತನನ್ನು ಶಾಲೆಯಿಂದ ಹೊರಗೆ ಎಳೆದುತಂದು ತಲೆ ಹಾಗೂ ದೇಹದ ಮೇಲೆ ಕಪ್ಪು ಬಣ್ಣವನ್ನು ಸುರಿದು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆದ ಬಳಿಕ ವಿಚಾರ ಬೆಳಕಿಗೆ ಬಂದಿದೆ. ತಮ್ಮ ಪುತ್ರಿಗೆ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಶಿಕ್ಷಕ ರಾಜೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸರ್ಕಾರಿ ಶಿಕ್ಷಕನ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ. ರವಿವಾರ ಶಿಕ್ಷಕ ಪ್ರತಿದೂರು ದಾಖಲಿಸಿದ್ದಾರೆ. ಇದೀಗ ತನಿಖೆ ಮಾಡಲಾಗುತ್ತಿದೆ. ಶಿಕ್ಷಕನ ಬಂಧನವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.