-->
ಭವ್ಯಾ ಶೆಟ್ಟಿ ನನ್ನ ನೆಚ್ಚಿನ ಶಿಕ್ಷಕಿ- ಅಶ್ವಿನಿ ಅನುಶ್

ಭವ್ಯಾ ಶೆಟ್ಟಿ ನನ್ನ ನೆಚ್ಚಿನ ಶಿಕ್ಷಕಿ- ಅಶ್ವಿನಿ ಅನುಶ್


ನಾನು ಅದಾಗಲೇ ಪಿಯುಸಿ ಶಿಕ್ಷಣ ಮುಗಿಸಿದ್ದು, ಪದವಿಗೆಂದು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಸಂತ ಅಲೋಶಿಯಸ್‌ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯವನ್ನು ಆಯ್ದುಕೊಂಡೆ. ಆಗ ನಮ್ಮ ವಿಭಾಗದ ಮುಖ್ಯಸ್ಥೆಯಾಗಿದ್ದವರು ಭವ್ಯಾ ಶೆಟ್ಟಿ ಮೇಡಂ. ಸದಾ ಹಸನ್ಮುಖಿಯಾಗಿ ನಗುನಗುತ್ತಾ ಎಲ್ಲರೊಡನೆಯೂ ಮಾತನಾಡುವ ಅವರು ಕ್ಲಾಸ್‌ರೂಮ್‌ವಿಚಾರಕ್ಕೆ ಬಂದಾಗ ಟೀಚರ್‌ ಎಂಬ ಪದಕ್ಕೆ ಸೂಕ್ತ ಅರ್ಥವನ್ನು ನೀಡುವಂತಿದ್ದರು.

 ಆ ದಿನಗಳಲ್ಲಿ ಪದವಿ ತರಗತಿಗಳೆಂದರೆ ಯಾವುದೇ ರೀತಿಯ ಪಾಠ ಪುಸ್ತಕಗಳಿರುವುದಿಲ್ಲ, ಅಧ್ಯಾಪಕರು ಬಂದು ಒಂದು ಗಂಟೆ ಲೆಕ್ಚರ್‌ಕೊಟ್ಟು ಹೋಗುತ್ತಾರೆ... ಎಂಬಿತ್ಯಾದಿ ಅಂತೆ-ಕಂತೆಗಳನ್ನು ನಮ್ಮ ಅಕ್ಕ-ಅಣ್ಣಂದಿರು ಹೇಳುತ್ತಿದ್ದರು. ಇದನ್ನೇ ನಂಬಿ ನಾನೂ ಕಾಲೇಜಿಗೆ ಹೊರಟಿದ್ದೆ. ಆದರೆ ತರಗತಿಯಲ್ಲಿ ಕುಳಿತಮೇಲೆಯೇ ನನಗೆ ಅಸಲಿಯತ್ತಿನ ಅರಿವಾಗಿದ್ದು. 


ನಮ್ಮ ಭವ್ಯಾ ಮೇಡಂ ಕ್ಲಾಸ್‌ ಕೇಳುವುದು ಎಂದರೆ ನಮಗೆ ಎಲ್ಲಿಲ್ಲದ ಸಂಭ್ರಮ. ಯಾಕೆಂದರೆ ಅವರು ಮಾಡುವ ಪಾಠಗಳು ಪುಸ್ತಕದಲ್ಲಿನ ಪ್ರಬಂಧಗಳಂತಿರದೆ, ವಾಸ್ತವ ಜಗತ್ತಿಗೆ ಸಂಬಂಧಿಸಿರುತ್ತಿತ್ತು. ಅಷ್ಟೇ ಅಲ್ಲದೆ, ನಾವು ನಮ್ಮ ದಿನನಿತ್ಯದ ಜೀವನಕ್ಕೂ ಅದನ್ನು ಅಳವಡಿಸಿಕೊಳ್ಳುವಂತಿರುತ್ತಿತ್ತು. ಮಾಡುವ ಪಾಠಕ್ಕೆ ಜೀವ ತುಂಬುವಂತೆ, ಸುದ್ದಿ ಮೌಲ್ಯಗಳು, ಸುದ್ದಿ ಮೂಲಗಳ ಕುರಿತು ಪಾಠ ಪ್ರಾರಂಭಿಸುವಾಗ ಉದಾಹರಣೆಯ ಸಹಿತ ಅವುಗಳನ್ನು ವಿವರಿಸುತ್ತಿದ್ದರು. ಇದರಿಂದಲೇ ವಿಷಯಗಳ ಜೊತೆ ಅದನ್ನು ಕಲಿಸಿದವರೂ ನಮಗೆ ಹತ್ತಿರಾದದ್ದು.  


ಪಾಠಗಳನ್ನು ಯಾವ ರೀತಿ ಮಾಡುತ್ತಿದ್ದರೋ ಅದೇ ರೀತಿ ಬಹಳ ಅಂದವಾಗಿ ತಯಾರಾಗಿ ತರಗತಿಗೆ ಬರುತ್ತಿದ್ದ ಅವರನ್ನು ನೋಡುವುದೇ ವಿದ್ಯಾರ್ಥಿಗಳಿಗೊಂದು ಸಂಭ್ರಮ. ಕಾಟನ್‌ಸೀರೆ ಉಟ್ಟು, ಅದಕ್ಕೆ ಒಪ್ಪುವಂತಹ ಹಣೆಬೊಟ್ಟು ಇಟ್ಟು, ಬಣ್ಣಬಣ್ಣದ ಬಳೆಗಳನ್ನು ತೊಟ್ಟು ಬರುತ್ತಿದ್ದ ಭವ್ಯಾ ಮೇಡಂಗೆ ಅವರಿಗೇ ತಿಳಿಯದಂತೆ ಅನೇಕ ಫ್ಯಾನ್‌ಕ್ಲಬ್‌ಗಳು ಇರುತ್ತಿದ್ದವು. ಮೇಡಂ ಇವತ್ತು ಯಾವ ಬಣ್ಣದ ಸೀರೆಯನ್ನುಟ್ಟು ಬರುತ್ತಾರೆ, ಯಾವ ರೀತಿಯ ಬಳೆಗಳನ್ನು ಹಾಕುತ್ತಾರೆ... ಎಂಬ ವಿಷಯಗಳು ನಮ್ಮನಮ್ಮಲ್ಲಿನ ಚರ್ಚೆಗಳ ಭಾಗವಾಗಿರುತ್ತಿದ್ದವು. ಹೀಗೆ ನಮಗೆ ಅವರು ತರಗತಿಗೆ ಬಂದು ಪಾಠ ಮಾಡುತ್ತಾರೆ ಎಂದಾಗ ಅದೇನೋ ಖುಷಿ. ಅವರ ಬರುವಿಕೆಗಾಗಿ ನಾವುಗಳು ಕುತೂಹಲದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದ ದಿನಗಳು ಇಂದಿಗೂ ನೆನಪಿವೆ. 


ಇಂತಹ ಕೆಲ ಸವಿನೆನಪುಗಳೊಂದಿಗೆ ನಾನು ಸ್ನಾತಕೋತ್ತರ ಶಿಕ್ಷಣ ಮುಗಿಸಿ, ಪಿ.ಹೆಚ್.ಡಿ. ಶಿಕ್ಷಣಕ್ಕೆಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸೇರಿದಾಗ ಕೋರ್ಸ್‌ವರ್ಕ್‌ನಲ್ಲಿ ನನ್ನ ಸಹಪಾಠಿಯಾಗಿದ್ದುದು ಇದೇ ಭವ್ಯಾ ಮೇಡಂ. ಈ ಆರು ತಿಂಗಳಿನಲ್ಲಿ ನಾನು ಹಾಗೂ ಭವ್ಯಾ ಮೇಡಂ ಶಿಕ್ಷಕಿ-ವಿದ್ಯಾರ್ಥಿಗಿಂತ ಅಕ್ಕ-ತಂಗಿಯಂತಿದ್ದೆವು ಎಂದರೆ ಹೆಚ್ಚು ಸೂಕ್ತ. 
ಇದಾಗಿ ನನ್ನ ವೃತ್ತಿ ಜೀವನದ ಭಾಗವಾಗಿ ನಾನು ಕಲಿತ ಕಾಲೇಜಿಗೇ ಉಪನ್ಯಾಸಕಿಯಾಗಿ ಬಂದಾಗ ನಮ್ಮ ಅಂದಿನ ಹೆಚ್‌ಓಡಿ ಇಂದೂ ನನ್ನೊಂಗಿದ್ದಾರೆ, ಅಂದಿಗಿಂತಲೂ ಅಧಿಕ ಆತ್ಮೀಯರಾಗಿದ್ದಾರೆ. 

ಭವ್ಯಾ ಮೇಡಂ ನನ್ನ ಶಿಕ್ಷಕಿಯಾಗಿ, ಸಹಪಾಠಿಯಾಗಿ ಇಂದು ಸಹದ್ಯೋಗಿಯಾಗಿ ನನ್ನೊಂದಿಗಿದ್ದಾರೆ. ಕಳೆದ ಹನ್ನೊಂದು ವರ್ಷಗಳ ನಂಟು ಇಂದು ಜಾಸ್ತಿಯಾಗಿದೆ. ಅವರನ್ನು ಶಿಕ್ಷಕಿ ಎಂದಷ್ಟೇ ಹೇಳಿದರು ನಮ್ಮ ಬಾಂಧವ್ಯದ ವಿವರಣೆ ಅಪೂರ್ಣವಾದೀತು. ಅಂದು ಪಾಠ ಹೇಳಿಕೊಟ್ಟವರು ಎಂದು ಜೀವನದ ಪಥದಲ್ಲಿ ಸಾಗಲು ಸಹಕಾರಿಯಾಗಿದ್ದಾರೆ. ಅವರು ಆತ್ಮೀಯತೆಯಿಂದ ‘ಅಶೂ’ ಎಂದು ಕರೆದಾಗ ಆಗುವ ಅನುಭವವನ್ನು ವರ್ಣಿಸಲಾರೆ. ಊಟ ತಿಂಡಿಗಳೊಂದಿಗೆ ನೋವು ನಲಿವುಗಳನ್ನು ಹಂಚಿಕೊಳ್ಳುವಾಗ ಅಕ್ಕನಂತಿರುವ ಅವರು, ಸ್ನೇಹಿತೆಯಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. 
‘ಮೇಡಂ' ಎಂದು ಮಕ್ಕಳು ಅವರನ್ನು ಹುಡುಕಿಕೊಂಡು ಬರುವಾಗ ಒಂದೊಮ್ಮೆ ನಾನೂ ಹಾಗೆಯೇ ಬರುತ್ತಿದ್ದುದು ನೆನಪಾಗುತ್ತದೆ. 


ಮಾರ್ಗದರ್ಶಕಿ, ಅಕ್ಕ, ಸ್ನೇಹಿತೆ, ಸಹೋದ್ಯೋಗಿ ಹೀಗೆ ನನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಿರುವ ಭವ್ಯಾ ಮೇಡಂ ಇಂದಿಗೂ ನನ್ನ ಶಿಕ್ಷಕಿಯೇ; ನಾನು ಅವರ ವಿದ್ಯಾರ್ಥಿಯೇ. ಶೈಕ್ಷಣಿಕ ವಿಷಯಗಳ ಜೊತೆಗೆ ಜೀವನದ ಪಾಠವನ್ನೂ ಹೇಳಿಕೊಟ್ಟು, ಎಡವಿದಾದ ತಿದ್ದುವ, ಸಾಧಿಸಿದಾಗ ಪ್ರಶಂಸಿಸುವ ಅವರು ಅಂದಿಗೂ, ಇಂದಿಗೂ ಎಂದೆಂದಿಗೂ ನನ್ನ ನೆಚ್ಚಿನ ಶಿಕ್ಷಕಿ. (Love you ಭವ್ಯಾ ಮೇಡಂ.)



ಅಶ್ವಿನಿ ಅನುಶ್
ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು

Ads on article

Advertise in articles 1

advertising articles 2

Advertise under the article