ಬಿಜು ಕೆ ಜೆ ನನ್ನ ನೆಚ್ಚಿನ ಟೀಚರ್- ದೀಪ್ತಿ ಬಿ ಕಡಬ
Monday, September 4, 2023
" ಕಲ್ಲುಕಲ್ಲೆಂಬುವಿರಿ,
ಕಲ್ಲೋಳಿಪ್ಪುದೆ ದೈವ?
ಕಲ್ಲಲ್ಲಿ ಕಳೆಯ ನಿಲಿಸಿದ,
ಗುರುವಿನ ಸೊಲ್ಲಲ್ಲೇ ದೈವ, ಸರ್ವಜ್ಞ."
ಎಂಬ ಸರ್ವಜ್ಞರ ನುಡಿಯಂತೆ, ಒಬ್ಬ ಗುರು ಸಾಮಾನ್ಯ ಕಲ್ಲಿನಂತಿರುವ ಮಗುವನ್ನು, ಬೋಧನೆ ಎಂಬ ಉಳಿಯಿಂದ ಕೆತ್ತಿ, ತನ್ನ ಅಪಾರವಾದ ಜ್ಞಾನ, ಸಾಮರ್ಥ್ಯ ಹಾಗೂ ಪ್ರೀತಿಯೆಂಬ ಆಯುಧದಿಂದ ಹದಗೊಳಿಸಿ ಆ ಮಗುವನ್ನು ಒಂದು ಸುಂದರವಾದ ಶಿಲೆಯನ್ನಾಗಿ ರೂಪಗೊಳಿಸುತ್ತಾನೆ ಹಾಗೂ ಆ ಶಿಲೆಗೆ ಜೀವ ತುಂಬುತ್ತಾನೆ.
ಇಂತಹ ಶ್ರೇಷ್ಠವಾದ ಸ್ಥಾನದಲ್ಲಿ ನಾನು ನನ್ನ ನೆಚ್ಚಿನ ಗುರುಗಳಾದ ಶ್ರೀ ಬಿಜು ಕೆ ಜೆ ಇವರನ್ನು ಸ್ಮರಿಸಲು ಇಚ್ಚಿಸುತ್ತಿದ್ದೇನೆ. ಗುರುಗಳ ಬಗ್ಗೆ ಅನಿಸಿಕೆ ಬರೆಯಲು ಸಿಕ್ಕದ್ದು ನನ್ನ ಪಾಲಿನ ಸುವರ್ಣಾವಕಾಶ. ಮೊದಲನೆಯದಾಗಿ "ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಸರ್" ಜೀವನದಲ್ಲಿ ಯಾವುದೇ ಒಂದು ನಿರ್ದಿಷ್ಟ ಗುರಿ ಇಲ್ಲದೆ, ನನ್ನ ಸಾಮರ್ಥ್ಯವೇನೆಂಬ ಅರಿವೇ ಇಲ್ಲದೆ, ಎಲ್ಲರೊಳು ಒಬ್ಬಳಾಗಿ ನಾನು ತರಗತಿಯಲ್ಲಿದ್ದೆ. ಆದರೆ ಇಂದು ನನ್ನ ಹೆಸರು ನಾಲ್ವರಿಗೆ ತಿಳಿದಿದೆ ಎಂದರೆ ಅದಕ್ಕೆ ಕಾರಣ ನನ್ನ ಗುರುಗಳು ಹಾಗೂ ಬೆಥನಿ ವಿದ್ಯಾಸಂಸ್ಥೆ. ಹಲವಾರು ಕಷ್ಟಗಳನ್ನು ಅನುಭವಿಸಿ ದಿಟ್ಟತನದಿಂದ ಎದುರಿಸಿ ಮುಂದೆ ಬಂದ ಸರ್ ನ ಬದುಕು ನಮಗೆಲ್ಲಾ ಸ್ಪೂರ್ತಿ.
ಸದಾ ಹಸನ್ಮುಖಿ, ಸಹೃದಯಿ, ಸಕಾರಾತ್ಮಕ ಚಿಂತಕ, ಸಹಕಾರಿ ಹೀಗೆ ಹಲವಾರು ಮೌಲ್ಯಗಳನ್ನು ಹೊಂದಿದ ಶ್ರೇಷ್ಠ ವ್ಯಕ್ತಿತ್ವ ಗುರುಗಳದು. ಅಂತೆಯೇ ಸರ್ ತಮ್ಮ ವಿದ್ಯಾರ್ಥಿಗಳಿಗೆ ಪುಸ್ತಕದ ಬದನೆಕಾಯಿಯ ಹೊರತಾಗಿ ಜೀವನ ಪಾಠ ಹಾಗೂ ಮೌಲ್ಯಗಳನ್ನು ಮನವರಿಕೆ ಮಾಡಿಸುತ್ತಾರೆ. ಸರ್ ತಮ್ಮ ವೃತ್ತಿ ಜೀವನವು ಸುಗಮವಾಗಿ ಸಾಗಲಿ ಎಂದು ಈ ಮೂಲಕ ಹಾರೈಸುತ್ತಿದ್ದೇನೆ.....
ದೀಪ್ತಿ ಬಿ
ಕಡಬ ತಾಲೂಕು