ಮಂಗಳೂರು: 'ಬಿಜೆಪಿಗ್ ಜೆಡಿಎಸ್ ಒಡು ಪೊಗ್ಗಿಲೆಕ' ತುಳುವಿನಲ್ಲೇ ಚಾಟಿ ಬೀಸಿದ ವೀರಪ್ಪ ಮೊಯ್ಲಿ
Saturday, September 23, 2023
ಮಂಗಳೂರು: ಬಿಜೆಪಿಗ್ ಜೆಡಿಎಸ್ ಒಡು ಪೊಗ್ಗಿಲೆಕ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯಿಲಿ ತುಳುವಿನಲ್ಲಿಯೇ ಚಾಟಿ ಬೀಸಿದರು.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಹೊಕ್ಕಿರುವ ಕಡೆಯಲ್ಲೆಲ್ಲಾ ಸಂಪೂರ್ಣ ನಿರ್ಣಾಮ ಆಯ್ತೆಂದೇ ಅರ್ಥ. ಅಂದು ನಾವು ಅವರೊಂದಿಗೆ ಸೇರಿದ ಸಂದರ್ಭದಲ್ಲಿ ನಾನು ಕೂಡ ಸೋತಿದ್ದೇನೆ. ಈಗ ಆ ಅನಿಷ್ಟ ದೂರವಾಗಿ, ಆ ಅನಿಷ್ಠ ಬಿಜೆಪಿ ಕಡೆಗೆ ಹೋಗಿದೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರಕಾರದ ಮಹಿಳಾ ಮಸೂದೆ ಪಾಸ್ ಮಾಡಿರುವುದು ಕಪಟ ನಾಟಕವೇ ಹೊರತು ಇದರಲ್ಲಿ ಪ್ರಾಮಾಣಿಕತೆಯಿಲ್ಲ. ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಆಸಕ್ತಿಯಿಲ್ಲ. ಶೂದ್ರ ಮಹಿಳೆಯರಿಗೆ ಮತದಾನದ ಹಕ್ಕು ಕೊಡಬಾರದೆಂದು ಗೋಲ್ವಾಲ್ಕರ್ ಹೇಳಿದ್ದರು. ಮನುಸ್ಮೃತಿ ಮಹಿಳೆಯರು ಪಾಪಿಷ್ಠರು ಎಂದು ಹೇಳಿತ್ತು.
ಮೂರು ಡಿಸಿಎಂ ಪಕ್ಷದ ಅಭಿಪ್ರಾಯವಲ್ಲ, ಕೆಲವು ಮಂತ್ರಿಗಳ ವೈಯಕ್ತಿಕ ಅಭಿಪ್ರಾಯ. ನಮ್ಮ ಪಕ್ಷ ಬಲಿಷ್ಠವಾಗಿದೆ. ಆದರೆ ಕೆಲವರು ಪಕ್ಷ ಗಟ್ಟಿ ಮಾಡಲು ಹೇಳುತ್ತಿದ್ದಾರೆ. ಅವರ ಸಲಹೆ ಸೂಚನೆಗಳನ್ನೂ ನಾವು ಕೇಳುತ್ತೇವೆ. ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಆದರೆ ಸದ್ಯಕ್ಕೆ ಮೂರು ಡಿಸಿಎಂ ಚರ್ಚೆ ಇಲ್ಲ ಎಂದು ಹೇಳಿದರು.
ನಾನು ಈ ಬಾರಿಯೂ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡಿತ್ತಿದ್ದೇನೆ. ಬಿ.ಕೆ.ಹರಿಪ್ರಸಾದ್ ವಿಚಾರ ಶಿಸ್ತು ಕಮಿಟಿ ಮುಂದೆ ಇದೆ. ಅವರಿಗೆ ನೋಟೀಸ್ ನೀಡಲಾಗಿದ್ದು, ಇದರ ಬಗ್ಗೆ ಸಮಿತಿ ನೋಡಿಕೊಳ್ಳುತ್ತದೆ. ಸಂವಿಧಾನದಲ್ಲಿ 'ಜಾತ್ಯಾತೀತ' ಪದವನ್ನು ಅಳಿಸಿ ಹಾಕಿರುವ ಬಗ್ಗೆ ಕಿಡಿಕಾರಿದ ವೀರಪ್ಪ ಮೊಯ್ಲಿಯವರು ಬಿಜೆಪಿ ಸಂವಿಧಾನ ವಿರೋಧಿ ಪಕ್ಷ. ಅವರಿಗೆ ತಾಕತ್ತು ದಮ್ಮು ಇದ್ದಲ್ಲಿ ಅದನ್ನು ಕಾಯ್ದೆ ಮಾಡಿ ಸಂಸತ್ತಿನಲ್ಲಿ ಚರ್ಚೆ ಮಾಡಲಿ ಎಂದರು.
ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಹೋರಾಟ ವಿಚಾರದಲ್ಲಿ ಬಾಲಿಶ ಹೇಳಿಕೆ ನೀಡಿದ ವೀರಪ್ಪ ಮೊಯ್ಲಿಯವರು ಒಂದು ಮಳೆ ಬಂದರೆ ಕಾವೇರಿ ವಿಚಾರ ತಣ್ಣಗಾಗುತ್ತದೆ ಎಂದು ಹೇಳಿದ್ದಾರೆ. ಈಗ ನಮ್ಮ ಸರ್ಕಾರ ಇರುವಾಗ ವಿರೋಧ ಮಾಡಲು ಆಗಲ್ಲ. ನಮ್ಮ ಸರ್ಕಾರ ಕೋರ್ಟ್ ಮೂಲಕ ಸಮಸ್ಯೆ ಸರಿ ಮಾಡಲು ಯತ್ನಿಸುತ್ತದೆ. ಬಿಜೆಪಿಯವರು ಈಗ ವಿರೋಧ ಪಕ್ಷದಲ್ಲಿ ಇದ್ದು ವಿರೋಧಿಸುತ್ತಿದ್ದಾರೆ. ಕರ್ನಾಟಕ ಕಾವೇರಿ ವಿಚಾರದಲ್ಲಿ ಸೋಲಲು ಅನೇಕ ಕಾರಣಗಳಿವೆ. ನಾವು ಕಾವೇರಿ ನೀರನ್ನು ಗರಿಷ್ಠವಾಗಿ ಉಪಯೋಗ ಮಾಡಿಲ್ಲ. ಆ ಕಾಲದ ಆಡಳಿತಗಾರರು ಮಾಡಿದ ತಪ್ಪಿನಿಂದ ಹೀಗಾಗ್ತಿದೆ. ಯಗಚಿ ಅಣೆಕಟ್ಟು ಮಾಡೋದನ್ನೂ ಅನೇಕರು ತಡೆದಿದ್ದರು. ಇದರಿಂದ ನಮಗೆ ಸಿಗಬೇಕಾದ ನೀರಿನ ಪಾಲು ಸಿಗಲಿಲ್ಲ ಎಂದರು.
ಎತ್ತಿನಹೊಳೆ ಯೋಜನೆ ಮುಗಿದ ಅಧ್ಯಾಯ. ಹಳೆಯ ವಿಚಾರವನ್ನು ಮತ್ತೆ ಮತ್ತೆ ಕೇಳಬೇಡಿ ಎಂದ ವೀರಪ್ಪ ಮೊಯ್ಲಿಯವರನ್ನು ಪತ್ರಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಎತ್ತಿನಹೊಳೆ ಯೋಜನೆಯನ್ನು ತರಾತುರಿಯಲ್ಲಿ ಮಾಡಿದ್ರಲ್ಲಾ. 20 ಸಾವಿರ ಕೋಟಿ ವ್ಯಯಿಸಿದರೂ ಒಂದು ಹನಿ ನೀರು ಹರಿಸಲು ಆಗಿಲ್ಲ ಯಾಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಮೊಯ್ಲಿಯವರು, ಅದಕ್ಕೆ ನಾನು ಎಲ್ಲಿ ಬೇಕೋ ಅಲ್ಲಿ ಉತ್ತರ ಕೊಡುತ್ತೇನೆ ಎಂದು ಮೌನಕ್ಕೆ ಜಾರಿದ್ದಾರೆ. ನೀವು ಚಿಕ್ಕಬಳ್ಳಾಪುರದಲ್ಲಿ ಮತ್ತೆ ಸ್ಪರ್ಧಿಸುತ್ತೀರಲ್ಲಾ, ಅಲ್ಲಿನ ಜನರಿಗೂ ಉತ್ತರ ಕೊಡಿ ಎಂಬ ಪ್ರಶ್ನೆಗೆ ಅವಾಗಲೇ ಉತ್ತರ ಕೊಡುತ್ತೇನೆಂದು ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿ ಹೋದರು.