ಬಳ್ಳಾರಿಯಲ್ಲಿ ಚಂದ್ರಬಾಬು ನಾಯ್ಡು ವಿವಾದಾತ್ಮಕ ಹೇಳಿಕೆ: ಡಾ.ರಾಜ್ ನೆನಪಾಗಲಿಲ್ಲವೇ ಎಂದ ನೆಟ್ಟಿಗರು
Thursday, September 7, 2023
ಬಳ್ಳಾರಿ: ಬಳ್ಳಾರಿಯಲ್ಲಿ ಖ್ಯಾತ ನಟ ಎನ್.ಟಿ.ಆರ್. ಅವರ ಪ್ರತಿಮೆ ಅನಾವರಣ ಮಾಡಿರುವ ಚಂದ್ರಬಾಬು ನಾಯ್ಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ಅವರ ಹೇಳಿಕೆಗೆ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ನಿಮಗೆ ಡಾ. ರಾಜ್ ಕುಮಾರ್ ನೆನಪಾಗಲಿಲ್ಲವೇ ಎಂಬ ಪ್ರಶ್ನೆ ಕೇಳುತ್ತಿದ್ದಾರೆ.
ಬಳ್ಳಾರಿಯಲ್ಲಿ ತೆಲುಗಿನ ಪ್ರಖ್ಯಾತ ನಟ ಎನ್.ಟಿ. ರಾಮರಾವ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ವಿಪಕ್ಷ ನಾಯಕ ಚಂದ್ರಬಾಬು ನಾಯ್ಡುರನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭ ಮಾಡಿರುವ ಭಾಷಣದಲ್ಲಿ ಚಂದ್ರಬಾಬು ನಾಯ್ಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಮ್ಮ ಭಾಷಣದಲ್ಲಿ ಚಂದ್ರಬಾಬು ನಾಯ್ಡುರವರು, “ಪೌರಾಣಿಕ ಪಾತ್ರಗಳಲ್ಲಿ ಎನ್.ಟಿ.ಆರ್. ಬಿಟ್ಟರೆ ಬೇರೆ ಯಾರೂ ಇಲ್ಲ” ಎಂದಿದ್ದಾರೆ. ಇದರಿಂದ ಕನ್ನಡಿಗರು ಸಿಟ್ಟಾಗಿದ್ದಾರೆ. “ಕರ್ನಾಟಕಕ್ಕೆ ಬಂದಾಗ ತಮಗೆ ಡಾ. ರಾಜ್ ನೆನಪಾಗುವುದಿಲ್ಲವೇ? ಡಾ. ರಾಜ್‌ಕುಮಾರ್ ಪೌರಾಣಿಕ ಪಾತ್ರಗಳನ್ನು ಮಾಡಿರಲಿಲ್ಲವೇ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಈ ವೇಳೆ ಕನ್ನಡ ನೆಲದಲ್ಲಿ ಎನ್‌ಟಿಆರ್ ಪ್ರತಿಮೆ ಏಕೆ ಎಂಬ ಪ್ರಶ್ನೆಯೂ ಉದ್ಭವಿಸಿದ್ದು “ಬಳ್ಳಾರಿ ಇನ್ನೊಂದು ಬೆಳಗಾವಿ ಆಗಲಿದೆ” ಎಂದು ಕನ್ನಡಿಗರು ಎಚ್ಚರಿಕೆ ಕೊಟ್ಟಿದ್ದಾರೆ.
ಸದ್ಯ ಚಂದ್ರಬಾಬು ನಾಯ್ಡು ವಿರುದ್ದ ಜಾಲತಾಣಗಳಲ್ಲಿ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಚಿವ ನಾಗೇಂದ್ರರಿಗೂ ಬಿಸಿ ತಟ್ಟಿದೆ.