ಮಂಜೇಶ್ವರ: ಒಂದೂವರೆ ತಿಂಗಳ ಹಸುಗೂಸನ್ನು ಕೆಸರಲ್ಲಿ ಮುಳುಗಿಸಿ ಹೆತ್ತತಾಯಿಂದಲೇ ಹತ್ಯೆ ಆರೋಪ - ತಂದೆ ತಾಯಿ ಜಗಳಕ್ಕೆ ಕೂಸು ಬಲಿ
Thursday, September 14, 2023
ಮಂಜೇಶ್ವರ: ಒಂದೂವರೆ ತಿಂಗಳ ಹಸುಗೂಸನ್ನು ಕೆಸರಿನಲ್ಲಿ ಮುಳುಗಿಸಿ ಹೆತ್ತತಾಯಿಯೇ ಕೊಲೆಗೈದಿದ್ದಾಳೆಂಬ ಆರೋಪ ಮಂಗಲ್ಪಾಡಿ ಬಳಿಯ ಕೋಟಿಬೈಲು ಎಂಬಲ್ಲಿ ಕೇಳಿಬಂದಿದೆ.
ಸತ್ಯನಾರಾಯಣ- ಸುಮಂಗಲಾ ದಂಪತಿಯ ಒಂದೂವರೆ ತಿಂಗಳ ಹಸುಗೀಸು ಕೆಸರಿನಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿತ್ತು. ಶಿಶುವಿನ ಕತ್ತಿನ ಭಾಗದಲ್ಲಿ ಗಾಯದ ಗುರುತು ಕಂಡು ಬಂದಿದೆ. ಆದ್ದರಿಂದ ಕತ್ತು ಹಿಸುಕಿ ಕೊಲೆಗೈದು ಕೆಸರಿನಲ್ಲಿ ಮುಳುಗಿಸಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯ ಎಸಗಿದ ಬಳಿಕ ಸುಮಂಗಲಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ. ಇದೀಗ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ಅಸ್ಪಷ್ಟ ಹೇಳಿಕೆ ನೀಡುತ್ತಿದ್ದು ಪೊಲೀಸರು ಆಕೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಸುಮಂಗಲಾ ಹಾಗೂ ಸತ್ಯನಾರಾಯಣರಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ದಾಂಪತ್ಯ ಹಾಗೂ ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಸುಮಂಗಲಾ ಉಪ್ಪಳ ಬಳಿಯ ಅತ್ತೆಯ ಮನೆಯಲ್ಲಿ ವಾಸವಿದ್ದಳು. ಪತಿಯೊಂದಿಗಿನ ವೈಮನಸ್ಯದಿಂದ ಮಾನಸಿಕ ತೊಂದರೆಗೀಡಾಗಿದ್ದಳು. ಇತ್ತೀಚಿಗೆ ತಾಯಿಯೂ ತೀರಿಕೊಂಡಿದ್ದರಿಂದ ಮಾನಸಿಕ ಖಿನ್ನಳಾಗಿದ್ದಳು. ಆಕದ ಮಗುವನ್ನು ಗದ್ದೆಯ ಬಳಿಗೆ ಕೊಂಡೊಯ್ಯುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಜೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.