ಮಂಗಳೂರು: ಡೇರೆ ತೊರೆದು, ಹವಾನಿಯಂತ್ರಿತ ಸಭಾಂಗಣದಲ್ಲಿ ಸರ್ಕಸ್ ಪ್ರದರ್ಶನ
Friday, September 22, 2023
ಮಂಗಳೂರು: ಇದೇ ಮೊದಲ ಬಾರಿಗೆ ಸರ್ಕಸ್ ಮಂಗಳೂರಿನಲ್ಲಿ ಡೇರೆಯನ್ನು ತೊರೆದು ಹವಾನಿಯಂತ್ರಿತ ಸಭಾಂಗಣದಲ್ಲಿ ಆಯೋಜನೆಗೊಂಡಿದೆ. ರ್‍ಯಾಂಬೊ ಸರ್ಕಸ್ ಕಂಪೆನಿ ನಗರದ ಟಿ.ಎಂ.ಎ. ಪೈ ಕನ್ವೆನ್ಷನ್ ಸೆಂಟರ್ ಹವಾನಿಯಂತ್ರಿತ ಸಭಾಂಗಣದಲ್ಲಿ ಸೆ. 21ರಿಂದ 24ರವರೆಗೆ ಸರ್ಕಸ್ ಪ್ರದರ್ಶನವಾಗಲಿದೆ. ಈ ಸರ್ಕಸ್ ಗೆ ಗುರುವಾರ ಚಾಲನೆ ದೊರಕಿದೆ.
ಶಾಸಕ ವೇದವ್ಯಾಸ ಕಾಮತ್ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಹವಾನಿಯಂತ್ರಿತ ಸಭಾಂಗಣದಲ್ಲಿ ಸರ್ಕಸ್ ಪ್ರದರ್ಶನ ಆಯೋಜನೆಗೊಂಡಿದೆ. ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಹಿತ ಆಗಮಿಸಿ ಈ ಅಪರೂಪದ ಕಲೆಯನ್ನು ಪ್ರೋತ್ಸಾಹಿಸಬೇಕು. ಒತ್ತಡದ ಬದುಕಿನಲ್ಲಿರುವ ನಗರದ ಜನರಿಗೆ ಸರ್ಕಸ್ ವಿಶಿಷ್ಟ ಮನೋರಂಜನೆ ನೀಡಲಿದೆ. ನಗರದ ವಿವಿಧ ವಿಶೇಷ ಶಾಲೆಗಳ ಮಕ್ಕಳಿಗೆ ಈ ಸರ್ಕಸ್ ನೋಡುವಂತೆ ಅವರಿಗೆ ಬೇಕಾದ ಸಹಕಾರವನ್ನು ಶಾಸಕನಾಗಿ ಒದಗಿಸಿಕೊಡುತ್ತೇನೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, 32 ವರ್ಷಗಳ ಇತಿಹಾಸವಿರುವ ರ್‍ಯಾಂಬೊ ಸರ್ಕಸ್ ಇದೀಗ ಒಳಾಂಗಣ ಸಭಾಗೃಹದಲ್ಲಿ ಪ್ರದರ್ಶನ ನೀಡುತ್ತಿದೆ. ಯಾವುದೇ ಪ್ರಾಣಿಗಳನ್ನು ಬಳಸದೆ ಕೇವಲ 60ಕ್ಕೂ ಅಧಿಕ ಸಿಬ್ಬಂದಿಯೊಂದಿಗೆ ಹಲವು ರೀತಿಯ ಕಸರತ್ತುಗಳೊಂದಿಗೆ ಮನರಂಜಿಸುತ್ತಿದೆ ಎಂದರು.