ಜ್ಯೂಸ್ ಎಂದು ಕೀಟನಾಶಕ ಸೇವಿಸಿ ಎರಡರ ಕೂಸು ಸಾವು
Monday, September 4, 2023
ರಾಮನಗರ: ಜ್ಯೂಸ್ ಎಂದು ಕೀಟನಾಶಕ ಸೇವಿಸಿದ ಎರಡು ವರ್ಷದ ಕೂಸೊಂದು ಮೃತಪಟ್ಟ ಹೃದಯವಿದ್ರಾವಕಾರಿ ಘಟನೆಯೊಂದು ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ರವಿವಾರ ನಡೆದಿದೆ.
ಕೃಷ್ಣಾಪುರ ಗ್ರಾಮದ ಹನುಮಂತು ಹಾಗೂ ಪುಷ್ಪ ದಂಪತಿಯ ಪುತ್ರ ಯಶ್ವಿಕ್ ಮೃತಪಟ್ಟ ದುರ್ದೈವಿ ಮಗು.
ಮೃತ ಕಂದಮ್ಮನ ತಂದೆ, ತಮ್ಮ ಬೆಳೆಗೆ ಕೀಟನಾಶಕವನ್ನು ಸಿಂಪಡಿಸಲು ದ್ರಾವಕವನ್ನು ತಂದಿದ್ದರು. ಸ್ವಲ್ಪ ಕೀಟನಾಶಕವನ್ನು ಬೆಳೆಗೆ ಸಿಂಪಡಿಸಿ ಬಾಕಿ ಉಳಿದಿದ್ದ ಔಷಧಿಯನ್ನು ಬಾಟಲಿಯೊಂದಕ್ಕೆ ಹಾಕಿಟ್ಟಿದ್ದರು. ಈ ಬಾಟಲಿಯಲ್ಲಿ ಇರುವುದು ಜ್ಯೂಸ್ ಎಂದು ಭಾವಿಸಿದ ಮಗು ಕೀಟನಾಶಕವನ್ನು ಸೇವಿಸಿದೆ.
ಕೀಟನಾಶಕವನ್ನು ಕುಡಿದ ತಕ್ಷಣ ಹೊಟ್ಟೆನೋವಿನಿಂದ ಮಗು ಕೂಗಾಡಲು ಆರಂಭಿಸಿದೆ. ತಕ್ಷಣ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.