ಪ್ರೀತಿಗೆ ಮನೆಯವರ ವಿರೋಧ ವಿಷ ಸೇವನೆ: ಪ್ರಿಯಕರ ಸಾವು, ಪ್ರೇಯಸಿ ಸ್ಥಿತಿ ಚಿಂತಾಜನಕ
Wednesday, September 13, 2023
ರಾಮನಗರ: ಪ್ರೀತಿಗೆ ಮನೆಯವರ ಒಪ್ಪಿಗೆ ಸಿಗಲಿಲ್ಲವೆಂದು ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೊಗೇನಕಲ್ ಜಲಪಾತದ ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ ಯುವಕ ಮೃತಪಟ್ಟಿದ್ದು, ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಚಾಮುಂಡಿಪುರದ ನಿವಾಸಿ ಉಮೇಶ್ (24) ಹಾಗೂ ಆತನ ಪ್ರೇಯಸಿ ಒಂದೇ ಊರಿನವರರಾಗಿದ್ದರು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದ ಹಿನ್ನೆಲೆಯಲ್ಲಿ ಇವರ ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ದೊರಕಿರಲಿಲ್ಲ. ಆದ್ದರಿಂದ ಸೆಪ್ಟೆಂಬರ್ 9ರಂದು ಪ್ರೇಮಿಗಳಿಬ್ಬರು ಗ್ರಾಮದಿಂದ ನಾಪತ್ತೆಯಾಗಿದ್ದರು.
ಈ ಸಂಬಂಧ ಯುವಕ ಹಾಗೂ ಯುವತಿಯ ಕುಟುಂಬಸ್ಥರು ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಕಾಣೆಯಾಗಿರುವವರ ಫೋಟೋಗಳನ್ನು ಎಲ್ಲಾ ಠಾಣೆಗೆ ಕಳುಹಿಸಿ ಕೊಟ್ಟಿದ್ದರು. ಮಂಗಳವಾರ ಬೆಳಗ್ಗೆ ಹೊಗೇನಕಲ್ ಜಲ್ಪಪಾತದ ಬಳಿ ಪ್ರೇಮಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಕಾಣೆಯಾಗಿರುವ ಪ್ರೇಮಿಗಳು ಇವರೇ ಎಂಬುದು ಖಚಿತಪಡಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಯುವಕ ಉಮೇಶ್ ಮೃತಪಟ್ಟಿದ್ದಾನೆ. ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.