ಉಳ್ಳಾಲ: ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು: ರೈಲು ನಿಲ್ಲಿಸಿ ಮೃತದೇಹ ತೆರವು
Monday, September 25, 2023
ಉಳ್ಳಾಲ: ರೈಲಿನಡಿಗೆ ಬಿದ್ದು ಯುವಕನೋರ್ವನು ಸಾವಿಗೆ ಶರಣಾಗಿರುವ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ರೈಲ್ವೇ ಗೇಟ್ ಬಳಿ ರವಿವಾರ ರಾತ್ರಿ ನಡೆದಿದೆ. ಆತನ ಛಿದ್ರಗೊಂಡ ಮೃತದೇಹವು ರೈಲಿನಡಿಯಲ್ಲಿ ಸಿಲುಕಿದ್ದು, ರೈಲನ್ನು ನಿಲ್ಲಿಸಿ ಅದನ್ನು ಹೊರತೆಗೆಯಲಾಗಿದೆ.
ಮಂಗಳೂರು ನಗರದ ಕೊಂಚಾಡಿ ನಿವಾಸಿ ಪ್ರಶಾಂತ್ (44) ಆತ್ಮಹತ್ಯೆಗೈದ ಯುವಕ.
ರವಿವಾರ ಸಂಜೆ ವೇಳೆಗೆ ಮನೆಯಿಂದ ಹೊರಬಂದ ಪ್ರಶಾಂತ್ ರಾತ್ರಿ ವೇಳೆಗರ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಆ್ಯಕ್ಟಿವಾ ಸ್ಕೂಟರ್ ನಲ್ಲಿ ಬಂದ ಪ್ರಶಾಂತ್ ಸ್ಕೂಟರನ್ನು ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿಟ್ಟು ಉಚ್ಚಿಲ ರೈಲ್ವೇ ಗೇಟ್ ವರೆಗೆ ಹಳಿಯಲ್ಲಿ ನಡೆದುಕೊಂಡು ಹೋಗಿ ರೈಲಿನಡಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ. ಅವಿವಾಹಿತರಾಗಿದ್ದ ಪ್ರಶಾಂತ್ ಮದ್ಯಪಾನ ಮಾಡಿ ಕೃತ್ಯವನ್ನು ಎಸಗಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಘಟನಾ ಸ್ಥಳಕ್ಕೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಎಎಸ್‌ಐ ಮಧುಚಂದ್ರ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿದೆ.