ನಿಂತಿದ್ದ ಲಾರಿಗೆ ವೇಗವಾಗಿ ಬಂದ ವ್ಯಾನ್ ಹಿಂಭಾಗದಿಂದ ಡಿಕ್ಕಿ: ಒಂದು ವರ್ಷದ ಮಗು ಸೇರಿ ಆರು ಮಂದಿ ಸ್ಥಳದಲ್ಲೇ ದಾರುಣ ಸಾವು
Wednesday, September 6, 2023
ಸೇಲಂ: ರಸ್ತೆಬದಿಯಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದಿರುವ ವ್ಯಾನೊಂದು ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಮಿಳುನಾಡಿನ ಸೇಲಂನಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ.
ಸೆಲ್ವರಾಜ್, ಮಂಜುಳಾ, ಆರ್ಮುಗಂ, ಪಳನಿಸಾಮಿ, ಪಪ್ಪತಿ ಹಾಗೂ ಒಂದು ವರ್ಷದ ಮಗು ಮೃತಪಟ್ಟ ದುರ್ದೈವಿಗಳು.
ಈಂಗೂರ್‌ನಿಂದ ಎಂಟು ಮಂದಿಯಿದ್ದ ವ್ಯಾನ್ ಪೆರುಂತುರೈ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ವ್ಯಾನ್ ಹಿಂಭಾಗದಿಂದ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ಬಗ್ಗೆ ತನಿಖೆ ನಡೆಸಿದ ಪೊಲೀಸರು ವ್ಯಾನ್ ಚಾಲಕನ ಅತೀಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.