ಅಂಗನವಾಡಿಯಿಂದ ಮರಳಿ ಮನೆಗೆ ಬಾರದ ಪತ್ನಿ - ಹುಡುಕಿಕೊಂಡು ಹೋದ ಪತಿಗೆ ಕಾದಿತ್ತು ಶಾಕ್
Saturday, September 9, 2023
ಭುವನೇಶ್ವರ್: ಅಂಗನವಾಡಿ ಕೇಂದ್ರದಲ್ಲೇ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೈದಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ಖಾಂತಪದ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾರಾಜಪುರ್ ಏರಿಯಾದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.
ಪ್ರಜ್ಯನಾ ಪರಿಮಿತ ದಾಸ್ ಮೃತಪಟ್ಟ ದುರ್ದೈವಿ.
ಪರಿಮಿತ ದಾಸ್ ಎಂದಿನಂತೆ ಶುಕ್ರವಾರ ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದರು. ಸಂಜೆಯಾದರೂ ಆಕೆ ಮನೆಗೆ ಮರಳದಿರುವುದರಿಂದ ಪತಿ ಬಿಸ್ಮಿತ್ ರಂಜನ್ ದಾಸ್, ಅಂಗನವಾಡಿ ಕೇಂದ್ರಕ್ಕೆ ಹೋಗಿ ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನು ನೋಡಿ ಪತಿ ಶಾಕ್ಗೆ ಒಳಗಾಗಿದ್ದಾನೆ.
ತಕ್ಷಣ ಆಕೆಯನ್ನು ಖಾಂತಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಕೌಟುಂಬಿಕ ಸಮಸ್ಯೆಗಳಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆಕೆಯ ಪತಿ ಬಿಸ್ಮಿತ್ ಮದ್ಯವ್ಯಸನಿ ಮತ್ತು ಅವನ ಹೆತ್ತವರು ಆಕೆಯನ್ನು ಹಿಂಸಿಸಿ ಸದಾ ಜಗಳವಾಡುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.
ಪರಿಮಿತ ದಾಸ್ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣವಿರಲಿಲ್ಲ. ತನ್ನ ಪುತ್ರಿ ಮಾನಸಿಕವಾಗಿ ಬಹಳ ಸದೃಢಳಾಗಿದ್ದಳು. ಆಕೆಯ ಪತಿ ಮದ್ಯವ್ಯಸನಿ ಮತ್ತು ಆಕೆಯ ಅತ್ತೆ ದುಷ್ಟ ಮಹಿಳೆ. ಅವರು ತನ್ನ ಪುತ್ರಿಯನ್ನು ಹಿಂಸಿಸಿ ಕೊಂದಿದ್ದಾರೆ ಎಂದು ಮೃತಳ ತಾಯಿ ಸರಸ್ವತಿ ದಾಸ್ ಆರೋಪಿಸಿದ್ದಾರೆ.
ಪರಿಮಿತ ದಾಸ್ ಪ್ರೇಮ ವಿವಾಹವಾಗಿದ್ದು, ಬಿಸ್ಮಿತ್ ರಂಜನ್ ದಾಸ್ ಮದ್ಯವ್ಯಸನಿಯಾಗಿದ್ದನು. ಅವನ ಕುಟುಂಬವು ನನ್ನ ಪುತ್ರಿಯನ್ನು ಎಂದಿಗೂ ಇಷ್ಟಪಡಲಿಲ್ಲ. ಅವರೆಲ್ಲ ಸೇರಿ ನನ್ನ ಪುತ್ರಿಯ ದೇಹವನ್ನು ನೇಣು ಹಾಕುವ ಮೊದಲು ಕೊಂದಿದ್ದಾರೆ ಅಥವಾ ಅವರ ಹಿಂಸೆಯ ಕಾರಣದಿಂದಾಗಿ ಅವಳೇ ನೇಣು ಹಾಕಿಕೊಂಡಿದ್ದಾಳೆ. ಏನೇ ಆಗಿದ್ದರೂ ಅದಕ್ಕೆ ಅವರೇ ಕಾರಣ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ ಎಂದು ಪರಿಮಿತ ದಾಸ್ ತಂದೆ ಆರೋಪಿಸಿದ್ದಾರೆ.