ಚಾಮರಾಜನಗರದ ಹಳ್ಳಿಗಳಲ್ಲಿ ಚಿಕ್ಕಮಕ್ಕಳಿಗೆ ಮದ್ದಿಲ್ಲದ ವಿಚಿತ್ರ ಚರ್ಮ ಕಾಯಿಲೆ - ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Friday, September 22, 2023
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೂರು ಹಳ್ಳಿಗಳಲ್ಲಿ ವಿಚಿತ್ರ ಚರ್ಮರೋಗ ಕಾಯಿಲೆಗೆ ಮಕ್ಕಳು ಬಲಿಯಾಗುತ್ತಿರು ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಯಿಲೆ ಕುರಿತಂತೆ ಜೆನಿಟಿಕ್ ರಿಸರ್ಚ್ ಮಾಡಿದವರ ಜೊತೆ ಚರ್ಚೆ ನಡೆಸಿದ ಸಚಿವರು, ಹೆಚ್ಚು ಮುಂಜಾಗೃತೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹನೂರು ತಾಲೂಕಿನ ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ ಸೇರಿದಂತೆ ಮೂರು ಹಳ್ಳಿಗಳಲ್ಲಿ ಚಿಕ್ಕಮಕ್ಕಳು ಈ
ವಿಚಿತ್ರ ಚರ್ಮರೋಗದಿಂಂದ ಬಳಲುತ್ತಿರುವುದು ಬೆಳಕಿಗೆ ಬಂದಿತ್ತು. ಆರು ತಿಂಗಳ ಮಗುವಾಗಿದ್ದಾಗಲೇ ಈ ವಿಚಿತ್ರ ಚರ್ಮರೋಗ ಕಾಣಿಸಿಕೊಂಡಿದ್ದು ಬಳಿಕ ಮೈ ಚರ್ಮವೆಲ್ಲಾ ಚುಕ್ಕಿಗಳಾಗಿ ಪರಿವರ್ತನೆಯಾಗಿ, ಮಕ್ಕಳಿಗೆ ದೃಷ್ಟಿ ದೋಷ, ಶ್ರವಣದೋಷ ಉಂಟಾಗಿ ಸಂಕಷ್ಟ ಅನುಭವಿಸುತ್ತಿದ್ದರು. 18 ವರ್ಷದ ತುಂಬುವುದರೊಳಗೆ ಕಾಯಿಲೆಗೆ ತುತ್ತಾದವರು ಸ್ವಾಧೀನ ಕಳೆದುಕೊಂಡು ಸಾವನ್ನಪ್ಪುತ್ತಿದ್ದರು.
ಝೀರೋಡರ್ಮಾ ಫಿಗ್ಮಂಟೇಷನ್ ಎಂದು ಜಿನಿಟಿಕ್ ರಿಸರ್ಚ್ ನಲ್ಲಿ ಕಾಯಿಲೆಯನ್ನ ಗುರುತಿಸಿದ್ದು, ಇಲ್ಲಿಯ ವರೆಗೆ 14 ಮಕ್ಕಳು ಈ ಕಾಯಿಲೆಗೆ ತುತ್ತಾಗಿದ್ದಾರೆ. 8 ಮಕ್ಕಳು ಸಾವಿನ್ನಪ್ಪಿದ್ದಾರೆ. ಮಕ್ಕಳು ಸಾವಿಗಿಡಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆ ಪ್ರದೇಶದಲ್ಲಿ ಜೆನಿಟಿಕ್ ರಿಸರ್ಚ್ ನಡೆಸುವಂತೆ ಸೂಚಿಸಿದ್ದರು. ಅಲ್ಲದೇ ಆರೋಗ್ಯ ಇಲಾಖೆಯಿಂದ ತಜ್ಞರ ತಂಡ ಕಳಿಸಿ ರೋಗಕ್ಕೆ ತುತ್ತಾದವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದರು.
ಇಂದು ಕಾಯಿಲೆಗೆ ತುತ್ತಾದವರ ಮನೆಗಳಿಗೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕುಟುಂಬಸ್ಥರಿಗೆ ಧರ್ಯ ತುಂಬಿದರು. ಕಾಯಿಲೆ ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಅಲ್ಲದೇ ಉಚಿತ ಚಿಕಿತ್ಸೆಯ ಜೊತೆಗೆ, ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚೆ ನಡೆಸುವುದಾಗಿ ಇದೇ ವೇಳೆ ಸಚಿವರು ಭರವಸೆ ನೀಡಿದರು.
ಜೆನಿಟಿಕ್ ಕಾಯಿಲೆಯಾಗಿದ್ದು, ಹತ್ತಿರದ ಸಂಬಂಧಿಕರಲ್ಲಿ ಮದುವೆಯಾದವರ ಮಕ್ಕಳಲ್ಲಿ ಈ ಕಾಯಿಲೆ ಹೆಚ್ವಾಗಿ ಕಾಣಿಸಿಕೊಂಡಿದೆ. ಮದ್ದಿಲ್ಲದ ಈ ಕಾಯಿಲೆಯನ್ನ ನಿಯಂತ್ರಸಲು, ಮುಂಜಾಗೃತೆ ವಹಿಸುವುದೊಂದೆ ಪರಿಹಾರ. ಈ ಭಾಗದವರು ಮದುವೆಯಾಗುವಾಗ ವೈದ್ಯರ ಸಲಹೆಗಳನ್ನ ಪಡೆಯುವುದು ಮುಖ್ಯ. ಈ ನಿಟ್ಟಿನಲ್ಲಿ ತಜ್ಞರು ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಿಕಲ್ ಸೆಲ್ ಸಂತ್ರಸ್ತರ ಅಹವಾಲು ಸ್ವೀಕರಿಸಿದ ಸಚಿವ ಗುಂಡೂರಾವ್
ಇನ್ನು ಕೊಳ್ಳೆಗಾಲದಲ್ಲಿ ಸಿಕಲ್ ಸೆಲ್ ರೋಗಕ್ಕೆ ಬುಡಕಟ್ಟು ಜನರ ಸಮಸ್ಯೆಗಳನ್ನ ಆಲೀಸಿದ ಆರೋಗ್ಯ ಸಚಿವರು, ಸಿಕಲ್ ಸೆಲ್ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮೆಷಿನ್ ಮೋಡ್ ನಲ್ಲಿ ಕಾರ್ಯಕ್ರಮಗಳನ್ನ ಹಾಕಿಕೊಂಡಿದೆ ಎಂದರು.
ರೋಗಿಗಳಿಗೆ ಈಗಾಗಲೇ ಉಚಿತವಾಗಿ ಸನ್ ಗ್ಲಾಸ್ ಗಳನ್ನ ನೀಡಲಾಗುತ್ತಿದೆ. ಅಲ್ಲದೇ ಔಷಧಿಗಳನ್ನ ಉಚಿತವಾಗಿ ವಿತರಣೆ ಮಾಡಲಾಗಿದೆ. ಇದಕ್ಕೆ ಬೇಕಾದ ಖರ್ಚುಗಳನ್ನ ಆಸ್ಪತ್ರೆಗಳಿಗೆ ನೀಡಿರುವ ಆರೋಗ್ಯ ವಿಮೆ ಹಣವನ್ನ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಇದೇ ವೇಳೆ ತಿಳಿಸಿದರು.