ಹಿಮಾಚಲ ಪ್ರದೇಶದ ಈ ಹಳ್ಳಿಯಲ್ಲಿ ನಿರ್ದಿಷ್ಟ ಐದು ದಿನಗಳ ಕಾಲ ಬಟ್ಟೆ ತೊಡುವಂತಿಲ್ಲ: ಈ ವಿಚಿತ್ರ ಆಚರಣೆಯ ಹಿಂದಿದೆ ಒಂದು ಕತೆ
Sunday, September 17, 2023
ಶಿಮ್ಲಾ: ಜಗತ್ತು ಬಹಳಷ್ಟು ಮುಂದುವರಿದು ನಾವು ವಿಜ್ಞಾನ ಯುಗದಲ್ಲಿದ್ದರೂ, ಜನರು ಇಂದಿಗೂ ಮೂಢನಂಬಿಕೆಗಳಿಗೆ ಕಟ್ಟು ಬಿದ್ದು ಕೆಲವು ವಿಚಿತ್ರ ಆಚರಣೆಗಳನ್ನು ಆಚರಿಸುತ್ತಿದ್ದಾರೆ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳು ಇವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಇನ್ನು ಕೆಲ ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅಂಥಹದ್ದೇ ಒಂದು ವಿಚಿತ್ರ ಆಚರಣೆ ಹಿಮಾಚಲ ಪ್ರದೇಶದ ಗ್ರಾಮವೊಂದರಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.
ಹೌದು, ಪ್ರಪಂಚದಾದ್ಯಂತ ಪುರುಷ ಮತ್ತು ಮಹಿಳೆಯರ ಸಮಾನತೆಯ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಪ್ರಪಂಚದ ಕೆಲವು ಭಾಗಗಳಲ್ಲಿ ಮಹಿಳೆಯರ ವಿರುದ್ಧ ಕೆಲವು ಅನಿಷ್ಟ ಪದ್ಧತಿಗಳು ಇನ್ನೂ ಆಚರಣೆಯಲ್ಲಿವೆ. ಈ ಸಂಪ್ರದಾಯಗಳನ್ನು ಅನುಸರಿಸಲೇಬೇಕು ಎಂದು ಕೆಲವು ಸಾಮಾಜಿಕ ಗುಂಪುಗಳು ಮಹಿಳೆಯರನ್ನು ಒತ್ತಾಯಿಸುತ್ತಿದ್ದಾರೆ. ಇಂತಹ ವಿಚಿತ್ರ ಮೂಢನಂಬಿಕೆ ಇಂದಿಗೂ ಭಾರತದ ಹಳ್ಳಿಯೊಂದರಲ್ಲಿ ಆಚರಣೆಯಲ್ಲಿದೆ. ಆ ಗ್ರಾಮದ ಮಹಿಳೆಯರು ವರ್ಷದ ನಿರ್ದಿಷ್ಟ ತಿಂಗಳಲ್ಲಿ ಐದು ದಿನಗಳ ಕಾಲ ಬಟ್ಟೆಯನ್ನೇ ಧರಿಸಬಾರದು ಎಂಬುದು ವಿಚಿತ್ರ ಸಂಪ್ರದಾಯ.
ಅಂದಹಾಗೆ ಈ ಗ್ರಾಮದ ಹೆಸರು ಬಿನಿ. ಇದು ಹಿಮಾಚಲ ಪ್ರದೇಶದ ಮಣಿಕರನ್ ಕಣಿವೆ ಪ್ರದೇಶದ ಒಂದು ಹಳ್ಳಿ ಪ್ರದೇಶ. ಈ ಗ್ರಾಮದಲ್ಲಿ ಇಂದಿಗೂ ಈ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ. ಅಂದರೆ ಶ್ರಾವಣ ಮಾಸದಲ್ಲಿ ಐದು ದಿನ ಈ ಗ್ರಾಮದ ಯಾವೊಬ್ಬ ಹೆಂಗಸರೂ ಬಟ್ಟೆ ಧರಿಸಬಾರದು. ಅದನ್ನು ಮೀರಿ ವಸ್ತ್ರ ತೊಟ್ಟರೆ ಕೆಟ್ಟದಾಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ.
ಈ ಐದು ದಿನಗಳಲ್ಲಿ ದಂಪತಿ ಪರಸ್ಪರ ಮಾತನಾಡಬಾರದು. ಅಲ್ಲದೆ ಪತಿ-ಪತ್ನಿ ಪ್ರತ್ಯೇಕವಾಗಿರಬೇಕು. ಈ ದಿನಗಳಲ್ಲಿ ಪುರುಷರಿಗೂ ಕೆಲವು ನಿರ್ಬಂಧಗಳಿವೆ. ಅದೇನೆಂದರೆ, ಈ ಐದು ದಿನಗಳಲ್ಲಿ ಹಳ್ಳಿಯಲ್ಲಿರುವ ಪುರುಷರು ಮದ್ಯಪಾನ ಮಾಡಬಾರದು ಮತ್ತು ಮಾಂಸಾಹಾರ ಸೇವಿಸಬಾರದು. ಯಾರೂ ಕೂಡಾ ಯಾವುದೇ ನಿಯಮಗಳನ್ನು ಉಲ್ಲಂಘಿಸಬಾರದು. ಈ ವಿಚಿತ್ರ ಪದ್ಧತಿಯನ್ನು ಗ್ರಾಮಸ್ಥರು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಆ ಹಳ್ಳಿಯ ಜನರು ಇದನ್ನು ತಮ್ಮ ಸಾಂಪ್ರದಾಯಿಕ ಪದ್ಧತಿ ಎನ್ನುತ್ತಾರೆ.
ಇನ್ನು ಈ ಆಚರಣೆಯ ಹಿಂದೆ ಒಂದು ಕತೆಯಿದೆ. ಹಿಮಾಚಲ ಪ್ರದೇಶದ ಮಣಿಕರನ್ ಕಣಿವೆಯಲ್ಲಿರುವ ಈ ಬಿನಿ ಗ್ರಾಮವನ್ನು ಕೆಲವು ದೆವ್ವಗಳು ಹಿಡಿದಿದ್ದವಂತೆ. ಈ ದೆವ್ವಗಳು ಸುಂದರವಾಗಿ ಬಟ್ಟೆ ಧರಿಸಿರುವ ಮಹಿಳೆಯರನ್ನೇ ಆವರಿಸಿಕೊಳ್ಳುತ್ತಿದ್ದವು. ಆ ಗ್ರಾಮಕ್ಕೆ ಲೂನಾ ಗೋತ್ ದೇವತೆ ಬಂದಾಗ, ಆ ಎಲ್ಲ ದೆವ್ವಗಳು ನಾಶವಾದವಂತೆ. ಅಂದಿನಿಂದ ಈ ಪದ್ಧತಿಯು ಹಳ್ಳಿಗೆ ಬಂದಿತು ಎಂದು ಹೇಳಲಾಗುತ್ತದೆ. ಅದನ್ನು ನೆನಪಿಟ್ಟುಕೊಳ್ಳಲು ಈ ಹಬ್ಬವನ್ನು 5 ದಿನಗಳವರೆಗೆ ಆಚರಿಸಲಾಗುತ್ತದೆ.