ಮಂಗಳೂರು: ಎಂಡಿಎಂಎ ಸಾಗಾಟ ಮಾಡುತ್ತಿದ್ದ ಪ್ರಮುಖ ಡ್ರಗ್ ಪೆಡ್ಲರ್ ನೈಜೀರಿಯಾ ಮಹಿಳೆ ಅರೆಸ್ಟ್
Saturday, September 2, 2023
ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಡಿಎಂಎ ಮಾದಕದ್ರವ್ಯವನ್ನು ಸಾಗಾಟ ಜಾಲದ ಪ್ರಮುಖ ಡ್ರಗ್ಸ್ ಪೆಡ್ಲರ್ ನೈಜೀರಿಯಾ ದೇಶದ ಮಹಿಳೆಯನ್ನು ದಸ್ತಗಿರಿ ಮಾಡಿ 20 ಲಕ್ಷ ಮೌಲ್ಯದ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
ನೈಜಿರಿಯಾ ಮೂಲದ ಸದ್ಯ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಅಡೆವೊಲೆ ಅಡೆಟುಟು ಆನು ಅಲಿಯಾಸ್ ರೆಜಿನಾ ಜರಾ ಅಲಿಯಾಸ್ ಆಯಿಶಾ(33) ಬಂಧಿತ ಆರೋಪಿ.
ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ದಂಧೆಯ ಕಿಂಗ್ ಪಿನ್ ಅನ್ನು ಪತ್ತೆ ಹಚ್ಚಲು ವಿಶೇಷ ತನಿಖೆ ಕೈಗೊಂಡಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ವೇಳೆ ಮಾದಕದ್ರವ್ಯವನ್ನು ಆರೋಪಿಗಳಿಗೆ ನೈಜಿರಿಯಾ ಮೂಲದ ಸದ್ಯ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಮಹಿಳೆಯೋರ್ವಳು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಿಂದ ವಶಪಡಿಸಿಕೊಂಡು ಆಕೆಯಿಂದ ಒಟ್ಟು 400 ಗ್ರಾಂ ತೂಕದ 20,00,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಒಂದು ಐಫೋನ್, ನಗದು 2910 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 20,52,910 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ಈಕೆ ವ್ಯಾಸಂಗ ವೀಸಾದಡಿಯಲ್ಲಿ ಭಾರತಕ್ಕೆ ಬಂದು ವಿದ್ಯಾಭ್ಯಾಸ ಮಾಡಿಕೊಂಡಿದ್ದಳು. ಬಳಿಕ ಸ್ವಲ್ಪ ಕಾಲ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದಳು. ನಂತರ ನರ್ಸಿಂಗ್ ಕೆಲಸವನ್ನು ಬಿಟ್ಟು ಮಾದಕವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದಳು. ಈಕೆಯ ವಿರುದ್ಧ ಸದ್ಯ ಮಂಗಳೂರು ನಗರದ ಉಳ್ಳಾಲ, ಸೆನ್ ಪೊಲೀಸ್ ಠಾಣೆ, ಮಂಗಳೂರು ಉತ್ತರ, ಕಂಕನಾಡಿ ನಗರ, ಕೊಣಾಜೆ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಏಳೂ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಈಕೆಯಿಂದಲೇ ಮಾದಕವಸ್ತುವನ್ನು ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.