ಮಂಗಳೂರು: ದಕ್ಕೆಯಲ್ಲಿ ಈದ್ ಮಿಲಾದ್ ಗೆ ಕಡ್ಡಾಯ ರಜೆ ಮಾಡಬೇಕೆಂಬ ಬ್ಯಾನರ್ ಅಳವಡಿಕೆ - ವಿಹೆಚ್ ಪಿ ವಿರೋಧ, ಸಂಘದಿಂದ ಸ್ಪಷ್ಟನೆ
Monday, September 25, 2023
ಮಂಗಳೂರು: ಈದ್ ಮಿಲಾದ್ ದಿನ ಹಸಿಮೀನು ವ್ಯಾಪಾರಸ್ಥರು ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕು ಇಲ್ಲದಿದ್ದಲ್ಲಿ ಬಹಿಷ್ಕಾರ, ದಂಡನೆಗೆ ಗುರಿಯಾಗಬೇಕೆಂದು ಎಚ್ಚರಿಕೆ ನೀಡಿರುವ ಬ್ಯಾನರ್ ವೊಂದು ನಗರದ ಬಂದರು ಧಕ್ಕೆ ಯಲ್ಲಿ ಅಳವಡಿಕೆಯಾಗಿದೆ. ಈ ಬ್ಯಾನರ್ ಅಳವಡಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದು ವಿಹಿಂಪ ಈ ಬ್ಯಾನರ್ ಗೆ ವಿರೋಧ ವ್ಯಕ್ತಪಡಿಸಿದೆ.
ಹಸಿ ಮೀನು ವ್ಯಾಪಾರಸ್ಥರ ಸಂಘ ಬಂದರು ನಗರದ ಧಕ್ಕೆಯಲ್ಲಿ ಹಸಿ ಮೀನು ವ್ಯಾಪಾರಿಗಳ ಗಮನಕ್ಕೆ ಎಂದು ಬ್ಯಾನರ್ ವೊಂದನ್ನು ಅಳವಡಿಸಿದ್ದಾರೆ. ಈ ಬ್ಯಾನರಿನಲ್ಲಿ ಈದ್ ಮಿಲಾದ್ ಅಂದರೆ ಸೆ.28ರ ಮುಂಜಾನೆ 3.45ರಿಂದ ಯಾವುದೇ ಮೀನು ವ್ಯಾಪಾರಿಗಳು ಕೆಲಸ ಮಾಡದೇ ಕಡ್ಡಾಯ ರಜೆ ಹಾಕಬೇಕು. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಸಂಘದ ವತಿಯಿಂದ ಒಂದು ತಿಂಗಳ ಕಾಲ ನಿಷೇಧ ಹೇರಲಾಗುವುದು ಎಂದು ಬ್ಯಾನರಿನಲ್ಲಿ ಎಚ್ಚರಿಸಲಾಗಿದೆ.
ನಿಯಮ ಉಲ್ಲಂಘಿಸಿದ ಮೀನು ವ್ಯಾಪಾರಿಗಳ ವಿರುದ್ಧ ಒಂದು ತಿಂಗಳ ಕಾಲ ಬಂದರು ದಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಹಸಿ ಮೀನು ವ್ಯಾಪಾರಸ್ಥರ ಸಂಘವು ಕಾನೂನು ಕ್ರಮ ತೆಗೆದುಕೊಳ್ಳುಲ್ಲದೆ, ದಂಡನೆಯನ್ನೂ ವಿಧಿಸಲಾಗುತ್ತದೆ. ಇತರ ಯಾವುದೇ ಸಹಾಯ, ಸಹಕಾರದಿಂದ ವಂಚಿತರಾಗಬೇಕಾಗುತ್ತದೆ ಎಂದು ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಬ್ಯಾನರ್ ಹಾಕಿ ಹಿಂದೂ ವ್ಯಾಪಾರಿಗಳನ್ನು ಎಚ್ಚರಿಸಲಾಗಿದೆ.
ಈ ಬ್ಯಾನರ್ ಬಗ್ಗೆ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ವಿರೋಧ ವ್ಯಕ್ತಪಡಿಸಿ, ಧಕ್ಕೆಯಲ್ಲಿ ದಂಡನೆ ವಿಧಿಸಲು ಶರಿಯತ್ ಕಾನೂನು ಜಾರಿಯಲ್ಲಿದೆಯಾ? ಎಂದು ಪ್ರಶ್ನಿಸಿದ್ದಾರೆ. ಇವರ ಬೆದರಿಕೆಯ ತಂತ್ರಗಳಿಗೆ ಹಿಂದೂ ಮೀನುಗಾರರು ಮಣಿಯಬಾರದು. ನಿಮ್ಮೊಂದಿಗೆ ಹಿಂದೂ ಸಮಾಜ ಇದೆ. ಪೊಲೀಸ್ ಇಲಾಖೆ ತಕ್ಷಣ ಈ ಬ್ಯಾನರ್ ಹಾಕಿದ ಅವರ ವಿರುದ್ದಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಂಗಳೂರು ಧಕ್ಕೆ ಹಸಿಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷ ಕೆ.ಅಶ್ರಫ್ ಸ್ಪಷ್ಟನೆ ನೀಡಿದ್ದು, ಮಂಗಳೂರು ಧಕ್ಕೆಯಲ್ಲಿ ಸಂಘದ ಸಭೆಯ ನಿರ್ಣಯದಂತೆ ಹಸಿ ಮೀನು ವ್ಯಾಪಾರಸ್ಥರ ಸಂಘದ ಸದಸ್ಯರ ಧಾರ್ಮಿಕ ಹಬ್ಬ ದಿನಗಳಲ್ಲಿ ತಮ್ಮ ವ್ಯವಹಾರಕ್ಕೆ ಕಡ್ಡಾಯ ರಜೆ ಹೊಂದುವ ಪೂರ್ವ ನಿರ್ಧರಿತ ಪದ್ಧತಿಯಂತೆ ಈ ಬರುವ ತಾರೀಕು 28 ಸೆಪ್ಟೆಂಬರ್ 2023 ರಂದು ಮುಸ್ಲಿಮ್ ಭಾಂದವರ ಹಬ್ಬವಾದ ಈದ್ ಮಿಲಾದ್ ಪ್ರಯುಕ್ತ ಅವರು ಮತ್ತು ಇತರ ಧರ್ಮ ಭಾಂದವರು ಕಡ್ಡಾಯ ರಜೆ ಪಾಲಿಸುವ ಬಗ್ಗೆ ವಿವಿಧ ಸಂಘಗಳಲ್ಲಿ ನಿರ್ಣಯಿಸಿದಂತೆ ಪ್ರಕಟಣೆ ಫಲಕ ಅಳವಡಿಸಲಾಗಿರುತ್ತದೆ. ಅದೇ ರೀತಿಯಲ್ಲಿ ವರ್ಷದ ಇತರ ದಿನಗಳಲ್ಲಿ ಇತರ ಹಬ್ಬಗಳಾದ ಬಾರ್ಕೂರು ಪೂಜೆ,ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದ್ ಉಲ್ ಫಿತರ್, ಬಕ್ರೀದ್, ಈದ್ ಮಿಲಾದ್, ಗುಡ್ ಫ್ರೈಡೇ ಮತ್ತು ಕ್ರಿಸ್ಮಸ್ ಎಂಬಿತ್ಯಾದಿ ಶುಭ ದಿನಗಳಲ್ಲಿ ಕೂಡಾ ಸಂಘಗಳ ನಿರ್ಣಯದಂತೆ ಮಾರಾಟಗಾರರು ಖಡ್ಡಾಯ ರಜೆ ಹೊಂದಿ ಆ ದಿನದ ಮಟ್ಟಿಗೆ ಮೀನುಗಾರಿಕಾ ಮಾರಾಟ ಚಟುವಟಿಕೆ ಸ್ಥಗಿತ ಗೊಳಿಸುವುದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದಿರುತ್ತದೆ.
ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘ, ಪರ್ಶಿಯನ್ ಬೋಟ್ ಯೂನಿಯನ್, ಟ್ರಾಲ್ ಬೋಟ್ ಯೂನಿಯನ್, ಫಿಶ್ ಬಯ್ಯರ್ಸ್ ಎಸೋಸಿಯೇಶನ್ ಮತ್ತಿತರ ಸಂಘಗಳು ಸಂಯುಕ್ತವಾಗಿ ಈ ರಜೆಗಳನ್ನು ನಿರ್ಧರಿಸಲಾಗಿದೆ
ಆದರೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಸಂಘದ ಈದ್ ಮಿಲಾದ್ ರಜೆಯ ಬ್ಯಾನರ್ ಬಗ್ಗೆ ಕೆಲವರು ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿರುವುದು ಖೇದಕರ. ಇಂತಹ ತಪ್ಪು ಮಾಹಿತಿಗಳಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದಾಗಿ ವಿನಂತಿಸಿದ್ದಾರೆ.