ಖಾಕಿ ಬಟ್ಟೆ ಧರಿಸಿದವರ ಮೇಲೆ ದಾಳಿ ಮಾಡಲು ತರಬೇತಿ : ನಾಯಿ ಸಾಕಾಣೆ ಕೇಂದ್ರದ ವ್ಯಕ್ತಿಗೆ ಪೊಲೀಸರೇ ಟಾರ್ಗೆಟ್
Tuesday, September 26, 2023
ಕೇರಳ: ಪೊಲೀಸರ ಕಣ್ಣು ತಪ್ಪಿಸಿ ಅಕ್ರಮ ಗಾಂಜಾ ವ್ಯವಹಾರ ಮಾಡಲು ಶ್ವಾನ ತರಬೇತಿ ಕೇಂದ್ರ ತೆರೆದಿದ್ದ ಆರೋಪಿಯೊಬ್ಬ, ಖಾಕಿ ಬಟ್ಟೆ ಧರಿಸುವ ಯಾವುದೇ ವ್ಯಕ್ತಿಯ ಮೇಲೆ ದಾಳಿ ಮಾಡುವಂತೆ ಶ್ವಾನಗಳಿಗೆ ತರಬೇತಿ ಕೊಟ್ಟಿದ್ದನು. ಇದೀಗ ಈ ವ್ಯಕ್ತಿಯನ್ನು ಬಂಧಿಸುವಲ್ಲಿ ಕೇರಳ ಪೊಲೀಸರು ಮುಂಚೂಣಿಯಲ್ಲಿದ್ದಾರೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ನಾಯಿ ಸಾಕಣೆ ಕೇಂದ್ರದ ಮೇಲೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ನಡೆಸುತ್ತಿದ್ದ ಶ್ವಾನ ತರಬೇತಿ ಕೇಂದ್ರದಿಂದ 17 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ದಾಳಿಯ ವೇಳೆ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ರಾಬಿನ್ ಜಾರ್ಜ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ತರಬೇತಿ ಪಡೆದಿದ್ದ ನಾಯಿಗಳ ಗುಂಪನ್ನು ಎದುರಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಅದೃಷ್ಟವಶಾತ್ ಪೊಲೀಸ್ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇಂದ್ರದಲ್ಲಿ ಪಿಟ್‌ಬುಲ್ಸ್ ಮತ್ತು ರೊಟ್‌ವೀಲರ್‌ಗಳು ಸೇರಿದಂತೆ ಸುಮಾರು 13 ನಾಯಿಗಳನ್ನು ಆರೋಪಿ ಸಾಕಿದ್ದ. ಇವುಗಳಿಗೆ ಖಾಕಿ ಬಣ್ಣದ ಬಟ್ಟೆ ಧರಿಸುವ ಯಾವುದೇ ವ್ಯಕ್ತಿಯನ್ನು ಕಂಡರೆ ಕಚ್ಚಲು ತರಬೇತಿ ಕೊಟ್ಟಿದ್ದಾನೆ ಎಂದು ಕೊಟ್ಟಾಯಂ ಪೊಲೀಸ್ ಸೂಪರಿಂಟೆಂಡೆಂಟ್ ಕೆ. ಕಾರ್ತಿಕ್ ತಿಳಿಸಿದರು. ಸದ್ಯ ಕೇರಳ ಪೊಲೀಸರು ಆರೋಪಿಯ ಹುಡುಕಾಟಕ್ಕಾಗಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ