ಕೇರಳದ ಗುರುವಾಯೂರಪ್ಪನಿಗೆ ಚಿನ್ನದ ಕಿರೀಟ - ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಿನ್ನದ ವ್ಯಾಪಾರಿಯ ಉಡುಗೊರೆ
Monday, September 4, 2023
ಗುರುವಾರ: ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯ ರೋಹಿಣಿ ನಕ್ಷತ್ರದಂದು ಪ್ರಸಿದ್ಧ ಗುರುವಾಯೂರು ದೇವಾಲಯದ ಶ್ರೀಕೃಷ್ಣನು ಚಿನ್ನದ ಕಿರೀಟದಿಂದ ಕಂಗೊಳಿಸಲಿದ್ದಾನೆ. ಕೇರಳದ ಚಿನ್ನದ ಉದ್ಯಮಿರೊಬ್ಬರು ಈ ಕಿರೀಟವನ್ನು ಗುರುವಾಯೂರಪ್ಪನಿಗೆ ಹರಕೆಯ ರೂಪದಲ್ಲಿ ಸಲ್ಲಿಸಿದ್ದಾರೆ.
ಸೆ.6ರಂದು ಶ್ರೀಕೃಷ್ಣ ಜನ್ಮಾಷ್ಟಮಿಯಿದೆ. ಅದೇ ದಿನ ಚಿನ್ನದ ಕಿರೀಟವನ್ನು ಗುರುವಾಯೂರಪ್ಪನಿಗೆ ಅರ್ಪಿಸಲಾಗುತ್ತದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುವ ಕೇರಳದ ತ್ರಿಶ್ಶೂರು ಜಿಲ್ಲೆಯ ಕೈನೂರು ತರವಾಡು ಮೂಲದ ಕೆ.ವಿ. ರಾಜೇಶ್ ಆಚಾರ್ಯ ಈ ಉಡುಗೊರೆ ನೀಡುತ್ತಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಅವರು ಗುರುವಾಯೂರಪ್ಪನಿಗೆ ಈ ಉಡುಗೊರೆ ನೀಡುತ್ತಿದ್ದಾರಂತೆ. ಈ ಚಿನ್ನದ ಕಿರೀಟ 38 ಸವರನ್ ತೂಕವಿದೆ. ಜನ್ಮಾಷ್ಟಮಿ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತದೆ. ಆ ಬಳಿಕ ಇದನ್ನು ದೇವಸ್ವಂನ ರಿಜಿಸ್ಟರ್‌ನಲ್ಲಿ ದಾಖಲಿಸಿ, ಸುರಕ್ಷಿತ ಲಾಕರ್‌ಗೆ ವರ್ಗಾಯಿಸಲಾಗುತ್ತದೆ.
ಕಳೆದ ತಿಂಗಳು ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಗುರುವಾಯೂರಪ್ಪನವರಿಗೆ 32 ಸವರನ್ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದರು. ಅಲ್ಲದೆ, ಚಥಯಂ ದಿನದಂದು ಗುರುವಾಯೂರಪ್ಪನವರಿಗೆ ಸುಮಾರು ನೂರು ಸವರನ್ ತೂಕದ ಚಿನ್ನದ ಕಿಂಡಿಯನ್ನು ಕಾಣಿಕೆಯಾಗಿ ಸ್ವೀಕರಿಸಲಾಯಿತು. ಇದನ್ನು ಟಿವಿಎಸ್ ಗ್ರೂಪ್ ಪ್ರಸ್ತುತಪಡಿಸಿದೆ. ಉದ್ಯಮಿ ಡಾ. ರವಿ ಪಿಳ್ಳೈ ಅವರು 2021ರ ಸೆಪ್ಟೆಂಬರ್ನಲ್ಲಿ 725 ಗ್ರಾಂ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.