-->
ಮಂಗಳೂರು: ಕಡಲಿನ ನಡುವೆ ಹೃದಯಾಘಾತಕ್ಕೊಳಗಾದ ಮೀನುಗಾರನ ರಕ್ಷಿಸಿದ ಕರಾವಳಿ ರಕ್ಷಣಾ ಪಡೆ

ಮಂಗಳೂರು: ಕಡಲಿನ ನಡುವೆ ಹೃದಯಾಘಾತಕ್ಕೊಳಗಾದ ಮೀನುಗಾರನ ರಕ್ಷಿಸಿದ ಕರಾವಳಿ ರಕ್ಷಣಾ ಪಡೆ


ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರಿಗೆ ಸಮುದ್ರದ ನಡುವೆಯೇ ಹೃದಯಾಘಾತಕ್ಕೊಳಗಾಗಿದ್ದರು. ಅವರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ಒದಗಿಸಿರುವ ಕರಾವಳಿ ರಕ್ಷಣಾ ಪಡೆ ತಕ್ಷಣ ನವಮಂಗಳೂರು ಬಂದರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ನೆರವಾಗಿದೆ.


'ಬೇಬಿ ಮೇರಿ-4' ದೋಣಿಯಲ್ಲಿ ವಸಂತ ಎಂಬ ಮೀನುಗಾರ ಮೀನುಗಾರಿಕೆಗೆ ತೆರಳಿದ್ದರು. ಇವರಿದ್ದ ದೋಣಿ ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಮುದ್ರದಲ್ಲಿತ್ತು. ಆದರೆ ಮಂಗಳವಾರ ಮಧ್ಯಾಹ್ನ 3.20ರ ವೇಳೆಗೆ ಅವರಿಗೆ ತೀವ್ರ ಎದೆನೋವು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಮತ್ತೊಂದು ಮೀನುಗಾರಿಕಾ ದೋಣಿಯ ಮೀನುಗಾರರು ಈ ಬಗ್ಗೆ ಕರ್ನಾಟಕದ ಕರಾವಳಿ ರಕ್ಷಣಾ ಪಡೆಯ ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿ ತುರ್ತು ನೆರವು ಕೋರಿದ್ದಾರೆ.


ತಕ್ಷಣ ಕರಾವಳಿ ರಕ್ಷಣಾ ಪಡೆ ಸಾಗರ ರಕ್ಷಣಾ ಉಪಕೇಂದ್ರವನ್ನು ಸನ್ನದ್ಧಗೊಳಿಸಿ, ತನ್ನೆಲ್ಲ ನೌಕೆಗಳಿಗೆ ತುರ್ತು ರಕ್ಷಣೆಯ ಅಗತ್ಯದ ಕುರಿತ ಸಂದೇಶ ರವಾನಿಸಲಾಗಿದೆ. ಈ ದೋಣಿಗೆ ಸಮೀಪದಲ್ಲಿದ್ದ ಕರಾವಳಿ ರಕ್ಷಣಾ ತಡೆಯ ಇಂಟರ್‌ಸೆಪ್ಟ್ ದೋಣಿ ಸಿ- 446, ವಸಂತ ಅವರಿದ್ದ ದೋಣಿಯತ್ತ ಧಾವಿಸಿದೆ. ತಕ್ಷಣ ಅದರಲ್ಲಿದ್ದ ಸಿಬ್ಬಂದಿ ವಸಂತರ ಆರೋಗ್ಯ ತಪಾಸಣೆ ನಡೆಸಿ, ಪ್ರಥಮ ಚಿಕಿತ್ಸೆ ಒದಗಿಸಿದರು. ಹೆಚ್ಚಿನ ಚಿಕಿತ್ಸೆ ಸಲುವಾಗಿ ಆ ಮೀನುಗಾರರನ್ನು ಅದೇ ದೋಣಿಯಲ್ಲಿ ಪಣಂಬೂರಿನ ನವಮಂಗಳೂರು ಬಂದರಿನ ದಕ್ಕೆಗೆ ಕರೆತಂದರು. ಬಳಿಕ ಹೃದಯಾಘಾತಕ್ಕೊಳಗಾದ ವಸಂತ ಅವರನ್ನು ನಗರದ ಬೆಂದೂರುವೆಲ್‌ನ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ವೈದ್ಯಕೀಯ ನೆರವು ಒದಗಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 

Ads on article

Advertise in articles 1

advertising articles 2

Advertise under the article