ಪದೋನ್ನತಿ ವರ್ಗಾವಣೆ: ನ್ಯಾಯಾಧೀಶರಾದ ಅಂಜಲಿ ಶರ್ಮಾ, ಚಿನ್ಮಯಿ ಅವರಿಗೆ ಬೀಳ್ಕೊಡುಗೆ
ಪದೋನ್ನತಿ ವರ್ಗಾವಣೆ: ನ್ಯಾಯಾಧೀಶರಾದ ಅಂಜಲಿ ಶರ್ಮಾ, ಚಿನ್ಮಯಿ ಅವರಿಗೆ ಬೀಳ್ಕೊಡುಗೆ
ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕಳೆದ ಎರಡು ವರ್ಷಗಳಿಂದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ನ್ಯಾಯಾಧೀಶರಾದ ಅಂಜಲಿ ಶರ್ಮಾ ಮತ್ತು ಚಿನ್ಮಯಿ ಆರ್.ಎಚ್. ಅವರು ಪದನೋನ್ನತಿ ಹೊಂದಿ ಬೆಂಗಳೂರು ನ್ಯಾಯಾಲಯಕ್ಕೆ ವರ್ಗವಾಗಿದ್ದಾರೆ. ಗೌರವಾನ್ವಿತ ಇಬ್ಬರು ನ್ಯಾಯಾಧೀಶರಿಗೆ ಮಂಗಳೂರು ನ್ಯಾಯಾಲಯ ಸಂಕೀರ್ಣದಲ್ಲಿ ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಭ ಹಾರೈಸಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ಮಂಗಳೂರಿನ ಜೆ.ಎಂ.ಎಫ್.ಸಿ. ಎರಡನೇ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಅಂಜಲಿ ಶರ್ಮ ವಿ. ಎಸ್. ಇವರು ಸೀನಿಯರ್ ಸಿವಿಲ್ ಜಡ್ಜ್ ಹುದ್ದೆಗೆ ಪದೋನ್ನತಿ ಹೊಂದಿ ಬೆಂಗಳೂರಿನ 10ನೇ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಗಿ ವರ್ಗಾವಣೆ ಹೊಂದಿದ ಪ್ರಯುಕ್ತ ಅವರನ್ನು ನ್ಯಾಯಾಲಯದ ಸಿಬ್ಬಂದಿಗಳ ಪರವಾಗಿ ಸಮ್ಮಾನಿಸಿ ಹಾರ್ದಿಕವಾಗಿ ಬೀಳ್ಕೊಡುವ ಸಮಾರಂಭವು ದಿನಾಂಕ 11.9.2023 ರಂದು ನ್ಯಾಯಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದ ಜೆ.ಎಂ.ಎಫ್.ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ತಾರಾ ಕೆ. ಸಿ. ಹಾಗೂ ಜೆ.ಎಂ.ಎಫ್.ಸಿ. ಎಂಟನೇ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಎಚ್. ಜೆ. ಶಿಲ್ಪಾ ಅವರು ಸೀನಿಯರ್ ಸಿವಿಲ್ ಜಡ್ಜ್ ಆಗಿ ಪದೋನ್ನತಿ ಹೊಂದಿದ ಶ್ರೀಮತಿ ಅಂಜಲಿ ಶರ್ಮ ವಿ. ಎಸ್. ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಮುಖ್ಯ ಲಿಪಿಕಾಧಿಕಾರಿ ಶ್ರೀ ಪ್ರಕಾಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ನ್ಯಾಯಾಂಗ ಅಧಿಕಾರಿಯಾಗಿ ನ್ಯಾಯಿಕ ಹಾಗೂ ಆಡಳಿತಾತ್ಮಕ ವಿಭಾಗಗಳಲ್ಲಿ ಶ್ರೀಮತಿ ಅಂಜಲಿ ಶರ್ಮ ವಿ.ಎಸ್. ಅವರು ಸಲ್ಲಿಸಿದ ದಕ್ಷ ಸೇವೆಯನ್ನು ಸ್ಮರಿಸಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಮತಿ ಅಂಜಲಿ ಶರ್ಮ ವಿ.ಎಸ್. ಅವರು ಮಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ನ್ಯಾಯಾಲಯದ ಸಿಬ್ಬಂದಿ ವರ್ಗ ನೀಡಿದ ಸಹಕಾರವನ್ನು ಸ್ಮರಿಸಿದರು.
ಶ್ರೀ ಚಿದಾನಂದ ಮೂರ್ತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಐದನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಚಿನ್ಮಯಿ ಆರ್.ಎಚ್. ಅವರಿಗೆ ಪ್ರತ್ಯೇಕ ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ನೀಡಲಾಯಿತು.
ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಗೌರವಾನ್ವಿತ ನ್ಯಾಯಾಧೀಶರಿಗೆ ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶುಭ ಹಾರೈಸಿ ಬೀಳ್ಕೊಟ್ಟರು.