ಆಧಾರ್ ದಾಖಲೆ ತಿದ್ದುಪಡಿ ಮಾಡಿ ಅಪ್ರಾಪ್ತೆಯೊಂದಿಗೆ ವಿವಾಹ: ಸಂಕಷ್ಟಕ್ಕೆ ಸಿಲುಕಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷ
Wednesday, September 13, 2023
ಮೈಸೂರು: 18ವರ್ಷ ಸಂಪೂರ್ಣವಾಗದಿದ್ದರೂ ಅಪ್ರಾಪ್ತೆಯ ಆಧಾರ್ ತಿದ್ದುಪಡಿ ಮಾಡಿ ಆಕೆಯನ್ನು ಅದ್ಧೂರಿಯಾಗಿ ಮದುವೆಯಾಗಿರುವ ಆರೋಪ ಗ್ರಾಮ ಪಂಚಾಯತ್ ಉಪಾಧ್ಯಕ್ಷನ ವಿರುದ್ಧ ಕೇಳಿಬಂದಿದೆ.
ನಂಜನಗೂಡು ತಾಲೂಕಿನ ಅರಿಯೂರು ಗ್ರಾಮದ ನಿವಾಸಿ, ಹಾಡ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಕುಮಾರ್ ಎಂಬುವರ ವಿರುದ್ಧ ಆರೋಪ ಕೇಳಿಬಂದಿದೆ. ಇದೀಗ ಹರೀಶ್ ಕುಮಾರ್ ನ ಗ್ರಾಮಸ್ಥರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು, ಹರೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಆಧಾರ್ ಕಾರ್ಡ್ನಲ್ಲಿನ ಹುಟ್ಟಿದ ದಿನಾಂಕವನ್ನು ತಿದ್ದುಪಡಿ ಮಾಡಿ ಹರೀಶ್ ಕುಮಾರ್ ಅಪ್ರಾಪ್ತೆಯನ್ನು ಮದುವೆ ಮಾಡಿಯಾಗಿದ್ದಾನೆ. ಈ ಬಗ್ಗೆ ಅರಿಯೂರು ಗ್ರಾಮಸ್ಥರು ದಾಖಲೆ ಸಹಿತ ಆರೋಪ ಮಾಡಿದ್ದಾರೆ. ಶಾಲಾ ದಾಖಾಲಾತಿಯನ್ನು ಸಾಕ್ಷಿಯಾಗಿ ನೀಡಿದ್ದು, ಅದರ ಪ್ರಕಾರ ವಧುವಿಗೆ ಇನ್ನೂ 18 ವರ್ಷ ಕೂಡ ತುಂಬಿಲ್ಲ. ಆದರೆ, ಆಧಾರ್ ಕಾರ್ಡ್ ತಿದ್ದುಪಡಿ ಮೂಲಕ ವಯಸ್ಸನ್ನು ಮರೆಮಾಚಿ ಮದುವೆ ಮಾಡಿಕೊಂಡಿದ್ದಾರೆ ಎಂದು ಹರೀಶ್ ವಿರುದ್ಧ ಆರೋಪ ಮಾಡಲಾಗಿದೆ.
ಕಳೆದ ಫೆ.15ರಂದು ನಂಜನಗೂಡಿನಲ್ಲಿ ಅದ್ಧೂರಿ ವಿವಾಹ ನೆರವೇರಿದೆ. ಅಂದಿನಿಂದ ಗ್ರಾಮಸ್ಥರು ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆ ಕಾಡುತ್ತಿದೆ. ಮದುವೆಯಾಗಿ 7 ತಿಂಗಳು ಕಳೆದ ಬಳಿಕ ಹರೀಶ್ ವಿರುದ್ಧ ದಾಖಲೆ ಸಮೇತ ದೂರು ನೀಡಿ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.